ಜಿಲ್ಲೆ

ಶಿಸ್ತುಬದ್ಧ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಿ

ವಿಜಯಪುರ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಸಿದ್ಧತೆಗಳ ಸ್ಥಳಗಳಿಗೆ ಬುಧವಾರ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ವಿಜಯಪುರದ ದರಬಾರ ಪ್ರೌಢಶಾಲೆಯಲ್ಲಿ ಪಿಆರ್‌ಒ ಹಾಗೂ ಎಪಿಆರ್‌ಒ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ, ಕೋವಿಡ್-19 ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆಯೂ ಅವರು ಪರಿಶೀಲನೆ ನಡೆಸಿದರು.

ತಿಕೋಟಾ ತಾಲೂಕಿನ ಎ.ಬಿ ಜತ್ತಿ ಹೈಸ್ಕೂಲ್ ಮತ್ತು ಪಿ.ಯು ಕಾಲೇಜು, ಬಬಲೇಶ್ವರ ತಾಲೂಕಿನ ಸರ್ಕಾರಿ ಐಟಿಐ ಕಾಲೇಜು, ಬಸವನ ಬಾಗೇವಾಡಿ ತಾಲೂಕಿನ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಕೊಲ್ಹಾರ ತಾಲೂಕಿನ ಸರ್ಕಾರಿ ಹೈಸ್ಕೂಲ್, ನಿಡಗುಂದಿ ತಾಲೂಕಿನ ಜಿವಿವಿಎಸ್ ಪಿಯು ಕಾಲೇಜು, ಮುದ್ದೇಬಿಹಾಳ ತಾಲೂಕಿನ ಎಂಜಿವಿಸಿ ಕಾಲೇಜ್, ತಾಳಿಕೋಟೆ ತಾಲೂಕಿನ ಎಸ್.ಕೆ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ತರಬೇತಿ ಸ್ಥಳಗಳಿಗೂ ಭೇಟಿ ನೀಡಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್, ಚುನಾವಣೆ ಪಾರದರ್ಶಕ ಹಾಗೂ ನ್ಯಾಯಬದ್ಧವಾಗಿ ನಡೆಸುವ ದಿಸೆಯಲ್ಲಿ ಚುನಾವಣೆಗೆ ನೇಮಿಸಿದ ಅಧಿಕಾರಿಗಳು, ಸಿಬ್ಬಂದಿ ಯಾವುದೇ ಲೋಪಕ್ಕೆ ಅವಕಾಶ ನೀಡದೆ ಚುನಾವಣಾ ಆಯೋಗದ ನಿರ್ದೇಶನ ಮತ್ತು ಮಾರ್ಗಸೂಚಿಗಳನ್ನು ಪರಿಪಾಲಿಸಿ, ಶಿಸ್ತುಬದ್ಧ ಚುನಾವಣೆಗೆ ಕ್ರಮಕೈಗೊಳ್ಳುವಂತೆ ಸಲಹೆ ನೀಡಿದರು. ವಿಜಯಪುರ ತಹಸೀಲ್ದಾರ್ ಮೋಹನ ಕುಮಾರಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.