ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ 14ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವದ ಉದ್ಘಾಟನೆಯನ್ನು ಜಾಜಿ ಮಲ್ಲಿಗೆ ಕವಿ ಡಾ. ಸತ್ಯಾನಂದ ಪಾತ್ರೋಟ ನೆರವೇರಿಸಿದರು. ಕಾ. ಕೆ. ಸೋಮಶೇಖರ, ಸಿದ್ದಲಿಂಗ ಬಾಗೇವಾಡಿ, ಕಾವೇರಿ ರಜಪೂತ ಮತ್ತಿತರರಿದ್ದಾರೆ.  
ಜಿಲ್ಲೆ

ವಿಜಯಪುರ ಸಾಂಸ್ಕೃತಿಕ ಜನೋತ್ಸವಕ್ಕೆ ಅದ್ದೂರಿ ಚಾಲನೆ, ದೇಶವೆಂದರೆ ಬರೀ ಮಣ್ಣಲ್ಲ; ಮನುಷ್ಯರು ಎಂದ ಡಾ.ಸತ್ಯಾನಂದ ಪಾತ್ರೋಟ

ವಿಜಯಪುರ: ದೇಶವೆಂದರೆ ಕೇವಲ ಮಣ್ಣಲ್ಲ, ಕುರ್ಚಿಯಲ್ಲ; ದೇಶವೆಂದರೆ ಮನುಷ್ಯರು. ಮನುಷ್ಯ ಸಂಬಂಧಗಳ ಹುಡುಕಾಟವೇ ಸಾಂಸ್ಕೃತಿಕ ಆಂದೋಲನವಾಗಬೇಕು. ಮನುಷ್ಯತ್ವ ಇರದ ಕಲೆ, ಸಾಹಿತ್ಯ, ಸಂಸ್ಕೃತಿ ಉತ್ಸವಗಳಿಗೆ ಅರ್ಥವೇ ಇಲ್ಲ ಎಂದು ಜಾಜಿ ಮಲ್ಲಿಗೆ ಕವಿ ಡಾ. ಸತ್ಯಾನಂದ ಪಾತ್ರೋಟ ಅಭಿಪ್ರಾಯಪಟ್ಟರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಆವಿಷ್ಕಾರ, ಎಐಡಿಎಸ್‌ಓ, ಎಐಡಿವೈಓ ಹಾಗೂ ಎಐಎಂಎಸ್‌ಎಸ್ ಸಂಘಟನೆಗಳ ನೇತೃತ್ವ ಶನಿವಾರ ನಡೆದ ‘14ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವ’ದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ನಾವು ಜಾತಿ-ಧರ್ಮಗಳ ಮಧ್ಯವರ್ತಿಗಳಾಗದೇ ಸತ್ಯದ ಮಧ್ಯವರ್ತಿಗಳಾಗಬೇಕು. ನಮ್ಮ ಮಧ್ಯೆ ಬರೆಯದ ಬರಹಗಾರರಿದ್ದಾರೆ, ಹಾಡದ ಹಾಡುಗಾರರಿದ್ದಾರೆ, ನರ್ತಿಸದ ನರ್ತಕಿಯರಿದ್ದಾರೆ. ಅಂತಹವರ ಬಗ್ಗೆ ನಾವು ಹಾಡಬೇಕು, ಬರೆಯಬೇಕು. ಇಂದು ಮುಖಂಡರು, ಅಧಿಕಾರಿಗಳು ಭ್ರಷ್ಟರಾಗುವ ಜೊತೆಗೆ ಲೇಖನ ಸಹ ಭ್ರಷ್ಟವಾಗಿದೆ. ಹೀಗಾದರೆ ರಕ್ಷಣೆ ಎಲ್ಲಿ? ನಮ್ಮನ್ನು ನಾವು ಕಂಡು ಕೊಳ್ಳುವುದೇ ಇದಕ್ಕೆ ಪರಿಹಾರ. ತನ್ನ ಸಮುದಾಯವನ್ನೂ ಮೀರಿ ಜನಸಾಮಾನ್ಯರಿಗೆ ನಾಯಕರಾದ ಜ್ಯೋತಿಬಾ ಫುಲೆಯಂಥವರು ನಮಗೆ ಆದರ್ಶವಾಗಬೇಕು ಎಂದರು.

ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ರಾಜ್ಯಾಧ್ಯಕ್ಷ ಕಾ. ಕೆ. ಸೋಮಶೇಖರ ಮಾತನಾಡಿ, ಮೂಲ ಸೌಲಭ್ಯ, ವಿಜ್ಞಾನಗಳ ಅಭಿವೃದ್ಧಿಗಿಂತ ನೀತಿ, ಸಂಸ್ಕೃತಿ, ಮೌಲ್ಯಗಳ ಅಭಿವೃದ್ಧಿ ನಿಜವಾದ ಅಭಿವೃದ್ಧಿ. ಇಂದಿನ ಸಮಾಜದ ಪ್ರಗತಿಗೆ ಪೂರಕವಾದುದನ್ನು ಮಾತ್ರ ನಾವು ಇತಿಹಾಸದಿಂದ ಅನುಸರಿಸಬೇಕು ಹೊರತು ಜನರನ್ನು ಒಡೆದು ಆಳುವ ಇತಿಹಾಸ, ಸಂಸ್ಕೃತಿಯನ್ನು ಇತಿಹಾಸದಲ್ಲಿ ಇದ್ದರೂ ಅದನ್ನು ಅನುಸರಿಸಬಾರದು ಎಂದರು.

ರಂಗಮಂದಿರದ ಆವರಣದಲ್ಲಿಯ ಸೂಕ್ತಿ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ಸಾಹಿತಿ ಮನು ಪತ್ತಾರ ಉದ್ಘಾಟಿಸಿದರು.

ಎಐಡಿಎಸ್‌ಒನ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಐಎಂಎಸ್‌ಎಸ್‌ನ ಜಿಲ್ಲಾಧ್ಯಕ್ಷೆ ಗೀತಾ ಎಚ್ ಹಾಗೂ ಆವಿಷ್ಕಾರದ ಮುಖಂಡ ಅಶೋಕ ದೇಸಾಯಿ ಉಪಸ್ಥಿತರಿದ್ದರು. ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಅಧ್ಯಕ್ಷತೆ ವಹಿಸಿದ್ದರು.

ವಿದೂಷಿ ಲಕ್ಷ್ಮಿ ತೇರದಾಳಮಠ ಅವರ ನಾಟ್ಯಕಲಾ ಸಂಸ್ಥೆ ಕಲಾವಿದರ ನೃತ್ಯ ರೂಪಕ, ಧಾರವಾಡ ಆಕಾಶವಾಣಿಯ ಬಿ ಹೈಗ್ರೇಡ್ ಕಲಾವಿದೆ ಕೃತಿಕಾ ವಿ. ಜಂಗಿನಮಠ ಅವರ ಕೊಳಲು ವಾದನ ಹಾಗೂ ಸ್ವಯಂಭೊ ಆರ್ಟ್ ೌಂಡೇಶನ್‌ನ ನಟಿ ಹಾಗೂ ಭರತನಾಟ್ಯ ಕಲಾವಿದೆ ವಿದೂಷಿ ದೀಕ್ಷಾ ಭೀಸೆ ಹಾಗೂ ದಿವ್ಯಾ ಭೀಸೆ ತಂಡದಿಂದ ಪ್ರದರ್ಶನಗೊಂಡ ನೃತ್ಯ ಪ್ರಕಾರಗಳು ಜನರ ಮನ ಸೆಳೆದವು.

ಬಾದಲ್ ಸರ್ಕಾರರವರು ರಚಿಸಿದ, ರಾಜೇಂದ್ರ ಕಾರಂತ್ ಅವರು ಕನ್ನಡಕ್ಕೆ ರೂಪಾಂತರಿಸಿದ ನಾಟಕ ‘ಮೋಜಿನ ಸೀಮೆಯಾಚೆ ಒಂದೂರು’ ಒಂದು ಸುಂದರ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿತು.