ಜಿಲ್ಲೆ

ಕರೊನಾ ಲಸಿಕೆ ಜಾಗೃತಿ ಮೂಡಿಸಿ

ವಿಜಯಪುರ: ಕರೊನಾ ಲಸಿಕೆ ಬಗ್ಗೆ ಜನರಲ್ಲಿ ಅಡಗಿರುವ ತಪ್ಪು ಗ್ರಹಿಕೆ ಹಾಗೂ ಭಯ ಹೋಗಲಾಡಿಸಲು ಗ್ರಾಮ ಮಟ್ಟದ ಕಾರ್ಯಪಡೆ ಸದಸ್ಯರು ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ತಿಳಿಸಿದರು.

ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಬುಧವಾರ ಗ್ರಾಮ ಮಟ್ಟದ ಕಾರ್ಯಪಡೆ ಸದಸ್ಯರ ಸಭೆ ನಡೆಸಿದ ಅವರು, ಕಾರ್ಯಪಡೆ ಸದಸ್ಯರು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಲು, ಮಾಸ್ಕ್, ಸ್ಯಾನಿಟೈಸರ್ ಬಳಸಲು ಜನರಿಗೆ ಮನವರಿಕೆ ಮಾಡಬೇಕು. 45 ವರ್ಷಕ್ಕಿಂತ ಮೇಲ್ಪಟವರಿಗೆ ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸಬೇಕೆಂದರು.

ಗ್ರಾಮ ಮಟ್ಟದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಜನರ ಆರೋಗ್ಯ ತಪಾಸಣೆ ನಡೆಸಬೇಕು. ರೋಗ ಲಕ್ಷಣಗಳು ಕಂಡು ಬಂದರೆ ಅಂಥವರನ್ನು ಕಾಳಜಿ ಕೇಂದ್ರಕ್ಕೆ ಕಳುಹಿಸಬೇಕೆಂದರು.

ಗ್ರಾಮಗಳಲ್ಲಿ ನಡೆಯುವ ಸಂತೆ, ಜಾತ್ರೆ, ಇನ್ನಿತರ ಸಭೆ-ಸಮಾರಂಭಗಳನ್ನು ನಿಷೇಧಿಸಿದ್ದು ಗ್ರಾಮಸ್ಥರು ಅದರಲ್ಲಿ ಪಾಲ್ಗೊಳ್ಳುವುದು ಆಗಲಿ ಅಥವಾ ಸಹಕಾರ ನೀಡುವುದಾಗಲಿ ಮಾಡಬಾರದು. ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರ ಹೋಗಬಾರದೆಂದು ತಿಳಿಸಿದರು.

ಜಿಪಂ ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನರು ಸಂಜೆ ವೇಳೆ ಅಂಗಡಿ ಮುಂಗಟ್ಟು ತೆಗೆದಿಡುತ್ತಿದ್ದಾರೆ. ಗುಡಿ ಕಟ್ಟೆಗೆ, ಗಿಡದ ಕಟ್ಟೆಗೆ ಕೂತು ಹರಟೆ ಹೊಡೆಯುತ್ತಿರುತ್ತಾರೆ. ಅಂಥವರಿಗೆ ತಿಳಿಹೇಳಬೇಕು ಎಂದರು. ಇಂಡಿ ಉಪ ವಿಭಾಗಾಧಿಕಾರಿ ರಾಹುಲ್ ಸಿಂಧೆ, ತಹಸೀಲ್ದಾರ್ ಸಂಜೀವಕುಮಾರ ದಾಸರ ಮತ್ತಿತರರಿದ್ದರು.