ಜಿಲ್ಲೆ

ಕರೊನಾಗೆ ಭಯಪಡುವ ಅಗತ್ಯ ಇಲ್ಲ

ವಿಜಯಪುರ: ಕರೊನಾ ಮಹಾಮಾರಿ ರೋಗಕ್ಕೆ ಯಾರು ಭಯಪಡಬೇಡಿ. ಕೋವಿಡ್ ಸೋಂಕಿನ ಕುರಿತು ಜಾಗೃತಿ ವಹಿಸುವ ಅಗತ್ಯವಿದೆ. ಸರ್ಕಾರದ ಆದೇಶಗಳನ್ನು ಪ್ರತಿಯೊಬ್ಬರೂ ಪಾಲಿಸುವುದು ಅತ್ಯಗತ್ಯ ಎಂದು ವೈದ್ಯ ಡಾ.ಬಾಬುರಾಜೇಂದ್ರ ನಾಯ್ಕ ಹೇಳಿದರು.

ನಗರದ ಲಯನ್ಸ್ ಕ್ಲಬ್ ಆ್ ಬಿಜಾಪುರ ಪರಿವಾರದ ವತಿಯಿಂದ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕರೊನಾ ಹಾಗೂ ಸಕ್ಕರೆ ಕಾಯಿಲೆ’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಸರ್ಕಾರದ ಆದೇಶಗಳನ್ನು ಪಾಲಿಸಿದರೆ ಆರೋಗ್ಯಯುತ ಜೀವನವನ್ನು ನಡೆಸಬಹುದಾಗಿದೆ. ಸಕ್ಕರೆ ಕಾಯಿಲೆ (ಮಧುಮೇಹ)ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ದಿನ ನಿತ್ಯ ವ್ಯಾಯಾಮ, ಯೋಗ ಮಾಡಿ ಆರೋಗ್ಯವನ್ನು ಕಾಯ್ದುಕೊಳ್ಳಬೇಕು ಎಂದರು.

ಡಾ.ಸುಜಾತಾ ಚಲವಾದಿ ಉಪನ್ಯಾಸ ನೀಡಿ, ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು. ಅದರಲ್ಲೂ ಹಿಂದುಳಿದ, ದಲಿತ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರುವಲ್ಲಿ ಹಿಂದೇಟು ಹಾಕಬಾರದು. ಪ್ರತಿಯೊಬ್ಬರಲ್ಲಿ ಸಾಧಿಸುವ ಛಲವಿದ್ದರೆ ಇಡೀ ವಿಶ್ವವನ್ನೇ ತಮ್ಮತ್ತ ನೋಡುವಂತೆ ಮಾಡುವ ಶಕ್ತಿ ಪ್ರತಿ ಮಹಿಳೆಯರಲ್ಲಿ ಇರುತ್ತದೆ. ಮಹಾಮಾರಿ ಕರೊನಾ ತಡೆಯುವುದಕ್ಕೆ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಲಯನ್ಸ್ ಕ್ಲಬ್ ಅಧ್ಯಕ್ಷ ಯಾಜ ಕಲಾದಗಿ ಮಾತನಾಡಿ, ಸಾವಿರಾರು ಬಡಜನತೆಗೆ ಸಹಾಯ ಮಾಡುವಲ್ಲಿ ನಮ್ಮ ಕ್ಲಬ್ ಮುಂದಾಗಿದೆ. ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಮ್ಮ ಕ್ಲಬ್ ಸದಾಸಿದ್ಧ ಎಂದು ಹೇಳಿದರು.

ಲಯನ್ ಕ್ಲಬ್ ಪರಿವಾರದ ನಿರ್ದೇಶಕರಾದ ಡಾ.ಅಶೋಕ ಜಾಧವ, ಎಸ್.ಎಸ್. ರಾಜಮಾನೆ, ಶ್ರವಣಕುಮಾರ ಮಹೇಂದ್ರಕರ, ರಾಜೇಶ ಗಾಯಕವಾಡ, ಜಯಶ್ರೀ ಲದ್ವಾ, ವಾಲು ಚವ್ಹಾಣ್, ಸೋಮಶೇಖರ ರಾಠೋಡ, ಶಿವಾನಂದ ಚಾಳಿಕರ, ಕೆ.ಆರ್.ಲಮಾಣಿ, ರಾಜೇಶ್ವರಿ ವಾಲಿ, ಶಶಿಕಲಾ ಇಜೇರಿ, ಉಷಾರಾವ್ ಮುಂತಾದವರು ಇದ್ದರು.