ವಿಜಯಪುರ: ಕರೊನಾದಿಂದ ಮೃತಪಟ್ಟ ಜೋರಾಪುರ ಪೇಠದ ಶ್ರೀಶೈಲ ಶಾಬಾದಿ ಅವರ ಪತ್ನಿ ಗೀತಾಂಜಲಿ ಶಾಬಾದಿ ಅವರಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವೈಯಕ್ತಿಕವಾಗಿ ಲಕ್ಷ ರೂ. ನೀಡುವ ಜತೆಗೆ, ಅವರ ಇಬ್ಬರು ಪುತ್ರರ ಹೆಸರಲ್ಲಿ ತಲಾ 50,000 ರೂ. ಠೇವಣಿ ಇಟ್ಟಿರುವ ಪತ್ರವನ್ನು ಹಸ್ತಾಂತರಿಸಿದರು.
ಈಚೆಗೆ ಜೋರಾಪುರ ಪೇಠದಲ್ಲಿ ನಡೆದ ಕರೊನಾ ಲಸಿಕೆ ಕಾರ್ಯಕ್ರಮದಲ್ಲಿ ಶಾಸಕರು ಠೇವಣಿ ಪ್ರತಿ ಹಾಗೂ ಚೆಕ್ ನೀಡಿದರು. ಗೀತಾಂಜಲಿ ಶಾಬಾದಿಯವರು ಬಣಗಾರ ಓಣಿಯಲ್ಲಿ ವಾಸಿಸುತ್ತಿದ್ದು, ಇವರ ಪತಿ ಶ್ರೀಶೈಲ ಟೇಲರಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಅನಾರೋಗ್ಯದಿಂದಾಗಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದರು. ಇದೀಗ ಅವರ ಕುಟುಂಬ ಸಂಕಷ್ಟದಲ್ಲಿದ್ದು, ಶಾಸಕರು ಸಹಾಯ ಹಸ್ತ ಚಾಚಿದ್ದಾರೆ. ಎಸ್‌ಪಿ ಅನುಪಮ ಅಗರವಾಲ್, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಮತ್ತಿತರರಿದ್ದರು.