ಜಿಲ್ಲೆ

ಗ್ರಾಪಂ ಕಾರ್ಯಪಡೆಗೂ ಕರೊನಾ ಕಂಟಕ

ಪರಶುರಾಮ ಭಾಸಗಿ
ವಿಜಯಪುರ:
ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸ್ಥಾಪಿಸಿದ ಗ್ರಾಮ ಪಟ್ಟದ ಕಾರ್ಯಪಡೆಗೂ ಕರೊನಾ ಕಂಟಕ ಆವರಿಸಿದ್ದು, ಸೋಂಕಿಗೊಳಗಾದ ಸಿಬ್ಬಂದಿ ಪೈಕಿ ಕೆಲವರು ಸಾವಿಗೀಡಾಗಿದ್ದು ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮಮಟ್ಟದ ಕಾರ್ಯಪಡೆ ರಚಿಸಲಾಗಿದೆ. ಇದರಲ್ಲಿ ಪಿಡಿಒ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಓರ್ವ ಸದಸ್ಯ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಪೊಲೀಸ್ ಬೀಟ್, ಆರೋಗ್ಯ ಸಹಾಯಕಿಯರು ಸೇರಿ ಮತ್ತಿತರರಿದ್ದಾರೆ.

ಗ್ರಾಮಕ್ಕೆ ವಲಸೆ ಬರುವ ಜನರನ್ನು ಗುರುತಿಸುವುದು, ಆರೋಗ್ಯ ಜಾಗೃತಿ ಮೂಡಿಸುವುದು, ಸ್ಯಾನಿಟೈಸ್ ಮಾಡುವುದು, ಅಂಗವಿಕಲರಿಗೆ, ವೃದ್ಧರಿಗೆ, ನಿರ್ಗತಿಕರಿಗೆ ಆಹಾರ ಒದಗಿಸುವುದು, ಕರೊನಾ ಲಸಿಕೆ ಹಾಕಿಸುವುದು ಹೀಗೆ ಮುಂತಾದ ಜವಾಬ್ದಾರಿಗಳನ್ನು ಈ ಕಾರ್ಯ ಪಡೆಗೆ ವಹಿಸಲಾಗಿದೆ. ಆದರೆ, ಸದರಿ ಕಾರ್ಯಪಡೆಯೇ ಕರೊನಾ ಆತಂಕ ಎದುರಿಸುತ್ತಿದ್ದು, ಈಗಾಗಲೇ ಕೆಲವರು ಜೀವ ಕಳೆದುಕೊಂಡಿದ್ದಾರೆ.

5 ಸಿಬ್ಬಂದಿ ಸಾವು
ಈವರೆಗೆ ಜಿಲ್ಲೆಯಲ್ಲಿ ಐವರು ಸಿಬ್ಬಂದಿ ಕರೊನಾಗೆ ಬಲಿಯಾಗಿದ್ದಾರೆ. ಬಸವನ ಬಾಗೇವಾಡಿ ತಾಲೂಕಿನ ಓರ್ವ ಪಿಡಿಒ ಪಿ.ಎಂ. ಜನಕರ, ದೇವರ ಹಿಪ್ಪರಗಿ ಡಿಇಒ ರಾಜಕುಮಾರ ಹುಬ್ಳಿಕರ, ಇಂಡಿ ತಾಲೂಕಿನ ಕಾರ್ಯದರ್ಶಿ ಬಂಡೆಪ್ಪ ತೇಲಿ, ಜಿಪಂ ಪಿಆರ್‌ಇಡಿ ವಿಭಾಗದ ಜೆಇ ಯುವರಾಜ ಎಂ. ನಾಯಕ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಜೆಇ ರಾಜಕುಮಾರ ಪವಾರ ಅಸುನೀಗಿದ್ದಾರೆ.

ಇನ್ನು 6 ಪಿಡಿಒ, ನಾಲ್ವರು ಕಾರ್ಯದರ್ಶಿ, ಓರ್ವ ಸಹಾಯಕ, ನಾಲ್ವರು ಗುಮಾಸ್ತರು, 7 ಸಿಬ್ಬಂದಿ ಮತ್ತು ಇಬ್ಬರು ಇತರೆ ಸಿಬ್ಬಂದಿ ಸೇರಿ ಒಟ್ಟು 24 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸದ್ಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು ಆ ಪಂಚಾಯಿತಿ ಜವಾಬ್ದಾರಿಯನ್ನು ಹಿರಿಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ.

ವಲಸಿಗರ ಮಾಹಿತಿ ಕಲೆ
ಕರೊನಾತಂಕದ ಮಧ್ಯೆಯೂ ಕಾರ್ಯ ಪಡೆ ವಲಸಿಗರ ಮಾಹಿತಿ ಕಲೆ ಹಾಕುತ್ತಿದೆ. ಜಿಲ್ಲೆಯಿಂದ ಬೇರೆ ಜಿಲ್ಲೆ, ರಾಜ್ಯಗಳಿಂದ ವಲಸೆ ಹೋದವರು ಲಾಕ್‌ಡೌನ್ ಹಿನ್ನೆಲೆ ಮರಳಿ ಗ್ರಾಮಕ್ಕೆ ಬಂದಿದ್ದು ಅಂಥವರನ್ನು ಗುರುತಿಸುವ ಕಾರ್ಯ ಭರದಿಂದ ಸಾಗಿದೆ. ಏ. 28ರಿಂದ ಈವರೆಗೆ ಜಿಲ್ಲೆಯಲ್ಲಿ 3637 ಜನ ವಿವಿಧ ಭಾಗಗಳಿಂದ ವಲಸೆ ಬಂದಿದ್ದಾರೆ. ಬೆಂಗಳೂರಿನಿಂದ 1342, ಇತರೆ ಜಿಲ್ಲೆಗಳಿಂದ 1033, ಇತರೆ ರಾಜ್ಯಗಳಿಂದ 1262 ಜನ ವಲಸೆ ಬಂದಿದ್ದಾರೆ. ಬಹುತೇಕರು ಲಾಕ್‌ಡೌನ್ ಘೋಷಣೆ ಹೊರಬಿದ್ದ ಮರುದಿನವೇ ಗ್ರಾಮ ಸೇರಿದ್ದಾರೆ. ಹೀಗೆ ವಲಸೆ ಬಂದವರನ್ನು ಗುರುತಿಸಿ, ಅವರ ಆರೋಗ್ಯ ತಪಾಸಣೆ ನಡೆಸಿ ಗೃಹ ಆರೈಕೆಗೆ ಸಲಹೆ ನೀಡಲಾಗುತ್ತಿದೆ. ಈ ಸಂದರ್ಭ ವಲಸಿಗರಿಂದ ಕಾರ್ಯ ಪಡೆಗೂ ಸೋಂಕು ಹರಡುತ್ತಿದ್ದು ಸಿಬ್ಬಂದಿ ಪೇಚಿಗೆ ಸಿಲುಕಿದ್ದಾರೆ.

ಗ್ರಾಪಂ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಲು ಆಗಲ್ಲ. ಅನಿವಾರ್ಯವಾಗಿ ಜನರ ಬಳಿ ಹೋಗಬೇಕಾಗುತ್ತದೆ. ಅದರಲ್ಲೂ ಗ್ರಾಮಮಟ್ಟದ ಕಾರ್ಯ ಪಡೆ ಸಕ್ರಿಯವಾಗಿದ್ದರಿಂದ ಸಹಜವಾಗಿಯೇ ಸೋಂಕು ಕಾಣಿಸಿಕೊಂಡಿದೆ. ಸೋಂಕಿನಿಂದ ಮೃತರಾದ ಸಿಬ್ಬಂದಿ ಕುಟುಂಬಸ್ಥರಿಗೆ ಅನುಕಂಪಾಧಾರಿದ ಉದ್ಯೋಗವಕಾಶ ಸಿಗಲಿದೆ. ಅದಾಗ್ಯೂ ಸಾಕಷ್ಟು ಸುರಕ್ಷಾ ಕ್ರಮಗಳೊಂದಿಗೆ ಕಾರ್ಯ ನಿರ್ವಹಿಸಲು ಸಿಬ್ಬಂದಿಗೆ ತಿಳಿಸಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಪಂಚಾಯಿತಿಯಿಂದಲೇ ಮಾಡಲಾಗಿದೆ.
ಗೋವಿಂದ ರೆಡ್ಡಿ, ಜಿಪಂ ಸಿಇಒ

ಲಾಕ್‌ಡೌನ್ ಹಿನ್ನೆಲೆ ಗುಳೆ ಹೋದವರು ಹೆಚ್ಚಿನ ಸಂಖ್ಯೆಯಲ್ಲಿ ವಾಪಸ್ ಆಗಿದ್ದಾರೆ. ಹೀಗೆ ಬಂದವರಲ್ಲಿ ಬೇರೆ ಜಿಲ್ಲೆಗಳಿಗೆ ಇಟ್ಟಿಗೆ ಬಟ್ಟಿ ಕೆಲಸಕ್ಕೆ ಹೋದವರು, ಮಹಾರಾಷ್ಟ್ರಕ್ಕೆ ವಿವಿಧ ಕೆಲಸಗಳಿಗೆ ತೆರಳಿದವರೇ ಹೆಚ್ಚು. ಅವರನ್ನು ಗುರುತಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಮಾಸ್ಕ್, ಸ್ಯಾನಿಟೈಸ್ ನೀಡಲಾಗುತ್ತಿದೆ. ಅವರಲ್ಲಿ ಯಾರಿಗಾದರೂ ಸೋಂಕು ಇದ್ದರೆ ಸಿಬ್ಬಂದಿಗೂ ತಗಲುವುದು ಸಹಜ. ಹಾಗಂತ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಸುರಕ್ಷೆತೆಯೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ.
ಸಿದ್ದರಾಮ ಸಿನಿಖೇಡ, ಪಿಡಿಒ ಹಿರೇಮಸಳಿ