ಜಿಲ್ಲೆ

ನದಿ ತೀರದಲ್ಲಿ ಹೆಚ್ಚಿದ ಪ್ರವಾಹ ಭೀತಿ

ವಿಜಯಪುರ: ಮಹಾಮಾರಿ ಕರೊನಾ ಗಾಯದ ಮೇಲೆ ವರುಣ ಬರೆ ಎಳೆದಿದ್ದು, ಒಂದು ವಾರದಿಂದ ತೀವ್ರಗೊಂಡಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಶನಿವಾರ ರಾತ್ರಿಯಿಡೀ ಸುರಿದ ಮಳೆಗೆ ಕೆರೆ ಕಟ್ಟೆಗಳಲ್ಲಿ ನೀರು ಜಿನುಗುತ್ತಿದೆ. ಅಲ್ಲಲ್ಲಿ ಒಡ್ಡುಗಳು ಒಡೆದು ಜಮೀನು ಜಲಾವೃತಗೊಂಡಿವೆ. ಮಣ್ಣಿನ ಮನೆಗಳು ಕುಸಿದು ಬದುಕು ಬೀದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ಹರಿದಿರುವ ಮೂರು ನದಿಗಳಲ್ಲೂ ನೀರಿನ ಮಟ್ಟ ಹೆಚ್ಚಿದ್ದು, ನದಿಯ ಇಕ್ಕೆಲಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

10.04 ಮಿಮೀ ಮಳೆ
ಶನಿವಾರ ರಾತ್ರಿಯಿಡೀ ಎರಡು ಮೂರು ಬಾರಿ ಜೋರಾಗಿ ನಂತರ ಜಿಟಿ ಜಿಟಿ ಮಳೆ ಸುರಿದಿದ್ದು, ಜಿಲ್ಲಾದ್ಯಂತ ಸರಾಸರಿ 10.04 ಮಿಮೀ ಮಳೆಯಾಗಿದೆ. ಅದರಲ್ಲೂ ವಿಜಯಪುರ ತಾಲೂಕು ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂದರೆ 41.02 ಮಿಮೀ ಮಳೆಯಾಗಿದೆ. ಬಬಲೇಶ್ವರ-18.04, ತಿಕೋಟಾ-18.45, ಬ.ಬಾಗೇವಾಡಿ-7.05, ಇಂಡಿ-0.56, ಸಿಂದಗಿ-19.52, ದೇವರಹಿಪ್ಪರಗಿ ಭಾಗದಲ್ಲಿ 15.1 ಮಿಮೀ ಮಳೆಯಾಗಿದೆ ಇನ್ನುಳಿದ ಕಡೆ ಸಣ್ಣ ಪ್ರಮಾಣದಲ್ಲಿ ಹನಿ ಜಿನುಗಿದೆ. ದೇವಹಿಪ್ಪರಗಿಯ ವಾರ್ಡ್ ನಂ. 5ರಲ್ಲಿ ಮೊಹ್ಮದ್ ನದಾಫ್ ಎಂಬುವರ ಮನೆಯೊಂದು ಕುಸಿದಿದ್ದು, ಕುಟುಂಬಸ್ಥರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಕೃಷ್ಣಾ-ಭೀಮಾತೀರದಲ್ಲಿ ಹೆಚ್ಚಿದ ಹರಿವು
ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಹೆಚ್ಚಿದ್ದರಿಂದ ಕೃಷ್ಣಾ ಹಾಗೂ ಭೀಮಾ ತೀರದಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಭಂಡಾರಕವಟೆ ಬ್ಯಾರೇಜ್ ಸೇರಿ ಹಲವು ಬ್ಯಾರೇಜ್‌ಗಳು ಮುಳುಗಿವೆ. ಅಫಜಲಪುರ ಬಳಿಯ ಸೊನ್ನ ಬ್ಯಾರೇಜ್ ಭರ್ತಿಯಾಗಿದ್ದು, 1,05,658 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಕೃಷ್ಣಾ ನದಿಗೆ ನಿರ್ಮಿಸಿರುವ ಆಲಮಟ್ಟಿ ಅಣೆಕಟ್ಟೆಯಲ್ಲಿ ಒಳಹರಿವು 47 ಸಾವಿರ ಕ್ಯೂಸೆಕ್ ತಲುಪಿದ್ದು, ಅಷ್ಟೇ ಪ್ರಮಾಣದಲ್ಲಿ ನೀರು ಹೊರಹರಿಸಲಾಗುತ್ತಿದೆ. ಡೋಣಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ.

ವಾರದಲ್ಲಿ 107 ಮನೆಗಳಿಗೆ ಹಾನಿ
ಸೆ. 13 ರಿಂದ ಈವರೆಗೆ ಜಿಲ್ಲೆಯಲ್ಲಿ ಮಳೆಯಿಂದ 107 ಮನೆಗಳು ಭಾಗಶಃ ಹಾನಿಯಾಗಿವೆ. ಬಬಲೇಶ್ವರ-1, ತಿಕೋಟಾ-8, ಬ.ಬಾಗೇವಾಡಿ-4, ನಿಡಗುಂದಿ-23, ಮುದ್ದೇಬಿಹಾಳ-6, ತಾಳಿಕೋಟೆ-3, ಇಂಡಿ-4, ಚಡಚಣ-3, ಸಿಂದಗಿ-49, ದೇ.ಹಿಪ್ಪರಗಿಯಲ್ಲಿ 5 ಮನೆಗಳು ಭಾಗಶಃ ಹಾನಿಗೀಡಾಗಿವೆ. ಚಡಚಣ ತಾಲೂಕಿನಲ್ಲಿ 5 ಕುರಿ ಅಸುನೀಗಿವೆ. ಮಳೆ ನೀರು ಜಮೀನುಗಳಿಗೆ ನುಗ್ಗಿ ಬಬಲೇಶ್ವರ ತಾಲೂಕಿನಲ್ಲಿ 150, ಸಿಂದಗಿ-120, ದೇವರಹಿಪ್ಪರಗಿ ತಾಲೂಕಿನಲ್ಲಿ 6.40 ಹೆಕ್ಟೇರ್ ಸೇರಿ ಒಟ್ಟು 276.40 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ವರದಿ ನೀಡಿದೆ.