ವಿಜಯಪುರ: ಕರೊನಾ ಅಟ್ಟಹಾಸ ದಿನೇ ದಿನೆ ಹೆಚ್ಚುತ್ತಿದ್ದು, 24 ಗಂಟೆಯಲ್ಲಿ ಜಿಲ್ಲೆಯಲ್ಲಿ 683 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. 8 ಜನ ಬಲಿಯಾಗಿದ್ದಾರೆ.
ಸೋಂಕಿತರ ಸಂಖ್ಯೆ 27049ಕ್ಕೆ ಏರಿಕೆಯಾದರೆ, ಮೃತರ ಸಂಖ್ಯೆ 292ಕ್ಕೇರಿದೆ. 541 ಜನ ಗುಣಮುಖರಾಗಿದ್ದಾರೆ. 1329 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು, 148 ಪರೀಕ್ಷೆಗಳನ್ನು ನಡೆಸಲಾಗಿದೆ. ಇನ್ನೂ 1181 ಜನರ ವರದಿ ಬರಬೇಕಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ನಗರದಲ್ಲೇ ಹೆಚ್ಚಿನ ಪ್ರಕರಣ
ವಿಜಯಪುರ ನಗರ ಕರೊನಾ ಹಾಟ್‌ಸ್ಪಾಟ್ ಆಗಿದ್ದು, ದಿನೇ ದಿನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇನ್ನುಳಿದಂತೆ ಮುದ್ದೇಬಿಹಾಳ, ಇಂಡಿ ಮತ್ತು ಸಿಂದಗಿಯಲ್ಲಿ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ವಿಜಯಪುರ ನಗರ-201, ವಿಜಯಪುರ ಗ್ರಾಮೀಣ-76, ಬಬಲೇಶ್ವರ-38, ತಿಕೋಟಾ-12, ಬ.ಬಾಗೇವಾಡಿ-29, ಕೊಲ್ಹಾರ-20, ನಿಡಗುಂದಿ-3, ಇಂಡಿ-52, ಚಡಚಣ-8, ಮುದ್ದೇಬಿಹಾಳ-129, ತಾಳಿಕೋಟೆ-18, ಸಿಂದಗಿ-76, ದೇ.ಹಿಪ್ಪರಗಿ-20 ಹಾಗೂ ಇತರ ಜಿಲ್ಲೆಯ 1 ಪ್ರಕರಣ ಪತೆಯಾಗಿವೆ.
ರೆಮ್‌ಡೆಸಿವಿರ್ ಸಮಸ್ಯೆ
ಕರೊನಾ ರೋಗಿಗಳಿಗೆ ರಾಮಬಾಣ ಎನ್ನಲಾದ ರೆಮ್‌ಡೆಸಿವಿರ್ ಚುಚ್ಚು ಮದ್ದು ಲಸಿಕೆ ಸಮಸ್ಯೆ ಸವಾಲಾಗಿ ಪರಿಣಮಿಸಿದೆ. ಜಿಲ್ಲಾಡಳಿತ ರೆಮ್‌ಡೆಸಿವಿರ್ ಸಮಸ್ಯೆ ಇಲ್ಲವೆನ್ನುತ್ತದೆ. ವಾಸ್ತವದಲ್ಲಿ ರೋಗಿಗಳು ರೆಮ್‌ಡೆಸಿವಿರ್‌ಗಾಗಿ ಅಂಗಲಾಚುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಒದಗಿಸುತ್ತಿರುವ ರೆಮ್‌ಡೆಸಿವಿರ್ ಕೇವಲ ಉಳ್ಳವರ ಪಾಲಾಗುತ್ತಿವೆಯಾ? ಎಂಬ ಅನುಮಾನ ಕಾಡುತ್ತಿದೆ.
ಜಿಲ್ಲಾಡಳಿತ ಪ್ರಕಾರ ರೆಮ್‌ಡೆಸಿವಿರ್ ಔಷಧವನ್ನು ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಆಯಾ ಆಸ್ಪತ್ರೆಗಳಿಗೆ ನೇರವಾಗಿ ಕಳುಹಿಸಲಾಗುತ್ತಿದೆ. ಆದರೆ, ಖಾಸಗಿ ಆಸ್ಪತ್ರೆಗಳು ಮಾತ್ರ ರೆಮ್‌ಡೆಸಿವಿರ್ ಸಮಸ್ಯೆ ಹೇಳುತ್ತಲೇ ಇದ್ದು, ರೋಗಿಗಳ ಸಂಬಂಧಿಕರಿಗೆ ನುಂಗಲಾರದ ತುತ್ತಾಗಿದೆ.
ಡಿಸಿ ಕಚೇರಿಗೆ ಕಳುಹಿಸಿದರೆ ಕ್ರಮ
ರೆಮ್‌ಡೆಸಿವಿರ್ ಶಿಫಾರಸು ಮಾಡಿ ವೈದ್ಯಾಧಿಕಾರಿಗಳು ಹಾಗೂ ಆಸ್ಪತ್ರೆಗಳವರು ಸೋಂಕಿತರ ಸಂಬಂಧಿಕರನ್ನು ಜಿಲ್ಲಾಡಳಿತದ ಬಳಿ ಕಳುಹಿಸಿದರೆ ಕಾನೂನು ಪ್ರಕಾರ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಎಚ್ಚರಿಸಿದ್ದಾರೆ.
ಈಗಾಗಲೇ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಆಯಾ ಆಸ್ಪತ್ರೆಗಳಿಗೆ ರೆಮ್‌ಡೆಸಿವಿರ್ ಕಳುಹಿಸಲಾಗಿದೆ. ಅವುಗಳನ್ನು ಸಮರ್ಪಕವಾಗಿ ಬಳಸಬೇಕೆಂದಿದ್ದಾರೆ. ರೆಮ್‌ಡೆಸಿವಿರ್ ದುರ್ಬಳಕೆ ಮಾಡಿಕೊಂಡವರ ಮೇಲೆ ಕ್ರಮ ಜರುಗಿಸಲಾಗಿದೆ. ಮುಂದೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ 33 ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಆ ಎಲ್ಲ ಆಸ್ಪತ್ರೆಗಳಿಗೆ ಮಂಗಳವಾರ 2054 ವೈಯಲ್ಸ್ ರೆಮ್‌ಡೆಸಿವಿರ್ ಕಳುಹಿಸಲಾಗಿದೆ. ಬಿಎಲ್‌ಡಿಇಗೆ ಅತಿ ಹೆಚ್ಚು ಅಂದರೆ 600 ವೈಯಲ್ಸ್ ರೆಮ್‌ಡೆಸಿವಿರ್ ಕಳುಹಿಸಲಾಗಿದ್ದು, ಇನ್ನುಳಿದ ಆಸ್ಪತ್ರೆಗಳಿಗೆ ಆದ್ಯತಾನುಸಾರ ಪೂರೈಸಲಾಗಿದೆ.
ರೆಮ್‌ಡೆಸಿವಿರ್ ಪೂರೈಕೆಗಾಗಿ ಜಿಲ್ಲಾಡಳಿತ ಸಾಕಷ್ಟು ಶ್ರಮಿಸುತ್ತಿದ್ದು, ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಡ್‌ಗಳಿಗಾಗಿ ತಪ್ಪದ ಅಲೆದಾಟ
ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಸಮಸ್ಯೆ ಹೆಚ್ಚಾಗಿದ್ದು, ಸೋಂಕಿತರು ತೀವ್ರ ಪರದಾಡುತ್ತಿದ್ದಾರೆ. ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳವರು ಜಿಲ್ಲಾಡಳಿತ ಹಾಗೂ ಸರ್ಕಾರಿ ವೈದ್ಯಾಧಿಕಾರಿಗಳು ಶಿಫಾರಸು ಮಾಡಿದ ಸೋಂಕಿತರನ್ನು ತೀವ್ರವಾಗಿ ನಿರ್ಲಕ್ಷಿಸುತ್ತಿದ್ದಾರೆ. ತಮ್ಮಲ್ಲೂ ಬೆಡ್ ಸಮಸ್ಯೆಯಿದ್ದು, ಎಲ್ಲಾದರೂ ತೆಗೆದುಕೊಂಡು ಹೋಗುವಂತೆ ಸಾಗಹಾಕುತ್ತಿದ್ದಾರೆ. ಇನ್ನು ದಾಖಲು ಮಾಡಿಕೊಂಡ ಶಿಫಾರಸು ಪಡೆದ ರೋಗಿಗಳಿಗೆ ವೆಂಟಿಲೇಟರ್ ಸಮಸ್ಯೆ ಹೇಳಿ ರೋಗಿಯನ್ನು ತೆಗೆದುಕೊಂಡು ಹೋಗುವಂತೆ ಬಲವಂತ ಮಾಡುತ್ತಿರುವುದು ಕಂಡು ಬಂದಿದೆ.
18-44 ವರ್ಷದ ನಾಗರಿಕರಿಗೆ ಲಸಿಕೆ ವಿತರಣೆ ಪ್ರಾರಂಭ
ಜಿಲ್ಲೆಯಲ್ಲಿ ಈಗಾಗಲೇ ಕರೊನಾ ಲಸಿಕೆ ಅಭಿಯಾನದಡಿ ವಿವಿಧ ಹಂತಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ತಿಳಿಸಿದ್ದಾರೆ .
ಮೇ 6 ರಿಂದ ಸರ್ಕಾರದ ಮಾರ್ಗಸೂಚಿ ಪ್ರಕಾರ ಎರಡನೇ ಡೋಸ್ ಪಡೆಯಲು ಅರ್ಹವಿರುವ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಹಾಗೂ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಆದ್ಯತೆ ನೀಡಲಾಗುತ್ತಿದೆ. 2 ನೇ ಡೋಸ್ ಲಸಿಕೆಗೆ ಅರ್ಹವಿರುವ ಫಲಾನುಭವಿಗಳು ಎಂದಿನಂತೆ ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆ, ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ಆರೋಗ್ಯ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 18 ರಿಂದ 44 ವರ್ಷದ ನಾಗರಿಕರಿಗೆ ಮೇ 11ರಿಂದ 17ರ ವರೆಗೆ ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆ ಬಸವನ ಬಾಗೇವಾಡಿ, ಇಂಡಿ, ಸಿಂದಗಿ ಮತ್ತು ಮುದ್ದೇಬಿಹಾಳದಲ್ಲಿ (ಪ್ರತಿದಿನ ಒಂದು ಕೇಂದ್ರದಲ್ಲಿ 150 ಜನರಿಗೆ) ಕರೊನಾ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆಯಲು ಅರ್ಹವಿರುವ ಫಲಾನುಭವಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿ ವೇಳಾಪಟ್ಟಿಯಂತೆ ಲಸಿಕಾ ಕೇಂದ್ರವನ್ನು ಬುಕ್ ಮಾಡಿಕೊಂಡು ಹೋಗಿ ಲಸಿಕೆ ಪಡೆಯಬೇಕು. ನೋಂದಣಿ ಮಾಡಿಕೊಂಡು ಬಂದವರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.