ಜಿಲ್ಲೆ

ವಿಜಯಪುರ ಸೇರಿ ವಿವಿಧ ಪಟ್ಟಣದಲ್ಲಿ ಸ್ಪಂದನೆ

ವಿಜಯಪುರ: ಕರೊನಾ ರೂಪಾಂತರಿ ಒಮಿಕ್ರಾನ್ ಹಾವಳಿ ತಡೆಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಗುಮ್ಮಟನಗರಿ ಭಾಗಶಃ ಸ್ತಬ್ಧಗೊಂಡಿತು. ಕರ್ಫ್ಯೂಗೆ ಜಿಲ್ಲೆಯ ಹಲವು ಪಟ್ಟಣಗಳಲ್ಲಿ ಉತ್ತಮ ಪ್ರತಿಕ್ರಿಯೆ, ಇನ್ನು ಕೆಲವು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿತು.

ಜನರಿಗೆ ಅವಶ್ಯಕ ಸೇವೆ ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಪೆಟ್ರೋಲ್ ಬಂಕ್, ಔಷಧ ಅಂಗಡಿ, ಕಿರಾಣಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆಟೋ ಸಂಚಾರ, ಬಸ್ ಸಂಚಾರ ಎಂದಿನಂತೆ ಇತ್ತಾದರೂ ಜನ ಸಂಚಾರ ಸಂಪೂರ್ಣ ವಿರಳವಾಗಿತ್ತು. ಜನ ಸಂಚಾರ ವಿರಳವಾಗಿದ್ದರಿಂದ ಬೆರಳೆಣಿಕೆಯಷ್ಟು ಮಾತ್ರ ಆಟೋಗಳು ರಸ್ತೆಗಳಿದಿದ್ದವು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ನಗರದ ಕೆಲವು ಹೋಟೆಲ್, ಚಹಾ ಅಂಗಡಿಗಳು ಅಲ್ಲಲ್ಲಿ ತೆರೆದಿದ್ದವು. ಅಲ್ಲಿಯೂ ಸಹ ಕುಳಿತು ಉಪಾಹಾರ, ಊಟ ಸೇವಿಸುವ ಅವಕಾಶ ಕಲ್ಪಿಸದೆ ಕೇವಲ ಪಾರ್ಸಲ್‌ಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ದೇವಾಲಯಗಳು, ಸಾರ್ವಜನಿಕ ಉದ್ಯಾನ, ಚಿತ್ರಮಂದಿರ ಮೊದಲಾದವುಗಳು ಸಂಪೂರ್ಣ ಬಂದ್ ಆಗಿದ್ದವು.ಲಾಠಿ ರುಚಿ ತೋರಿಸಿದ ಪೊಲೀಸರು
ವಿಜಯಪುರದ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್‌ಗಳಿಂದ ಲಾಕ್ ಮಾಡಲಾಗಿತ್ತು.

ಕೇಂದ್ರ ಬಸ್ ನಿಲ್ದಾಣ, ಗಾಂಧಿಚೌಕ್, ಸಿದ್ದೇಶ್ವರ ದೇವಾಲಯ ರಸ್ತೆ, ಬಾಗಲಕೋಟೆ ರಸ್ತೆ ಹೀಗೆ ಪ್ರಮುಖ ರಸ್ತೆಗಳಲ್ಲಿ ಒಂದು ಭಾಗವನ್ನು ಸಂಪೂರ್ಣವಾಗಿ ಬ್ಯಾರಿಕೇಡ್‌ಗಳಿಂದ ಮುಚ್ಚಲಾಗಿತ್ತು. ಸದಾ ಜನಸಂದಣಿಯಿಂದ ಕೂಡಿರುತ್ತಿದ್ದ ಗಾಂಧಿಚೌಕ್, ಕೇಂದ್ರ ಬಸ್ ನಿಲ್ದಾಣ, ಕೆ.ಸಿ. ಮಾರುಕಟ್ಟೆ ಮೊದಲಾದ ಸ್ಥಳಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಒಂದು ಬದಿ ಮಾತ್ರ ಸರ್ಕಾರಿ ಕಚೇರಿ, ಅವಶ್ಯಕ ಸೇವೆ, ತುರ್ತು ಕೆಲಸಗಳಿಗೆ ಹೋಗುವವರಿಗೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿಯೂ ಪೊಲೀಸ್ ಭದ್ರಕೋಟೆ ನಿರ್ಮಿಸಲಾಗಿತ್ತು. ಆರಕ್ಷಕರು ಪ್ರತಿಯೊಂದು ವಾಹನ, ಕಾರು ತಡೆದು ಐ.ಡಿ. ಕಾರ್ಡ್ ಪರಿಶೀಲನೆ ನಡೆಸಿ ಮುಂದಿನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅನವಶ್ಯಕವಾಗಿ ಹೊರಗೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ದೃಶ್ಯಗಳು ಕಂಡು ಬಂದವು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ನಗರದ ಕೆಲವು ಕಡೆಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.

ವ್ಯಾಪಾರ ವಹಿವಾಟಿಗೆ ಹೊಡೆತ
ವಾರಾಂತ್ಯದಲ್ಲಿ ಕರ್ಫ್ಯೂ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸಂಪೂರ್ಣ ವ್ಯಾಪಾರ, ವಹಿವಾಟಿನ ಮೇಲೆ ಹೊಡೆತ ಬಿದ್ದಿತು. ಜಿಲ್ಲಾ ಕೇಂದ್ರದ ಲಾಲ್‌ಬಹಾದುರ್ ಶಾಸ್ತ್ರಿ ಮಾರುಕಟ್ಟೆ, ಸರಾಫ್ ಬಜಾರ್, ಜವಳಿ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದರಿಂದ ಆರ್ಥಿಕತೆಗೆ ಪೆಟ್ಟು ಬಿದ್ದಿತು. ಶನಿವಾರ ಹಾಗೂ ಭಾನುವಾರ ಹೆಚ್ಚಾಗಿ ಜನರು ನಗರಕ್ಕೆ ಬರುತ್ತಾರೆ. ಆದರೆ ಕರ್ಫ್ಯೂ ಇದ್ದಿದ್ದರಿಂದ ಜನದಟ್ಟಣೆ ಇರಲಿಲ್ಲ.