ಜಿಲ್ಲೆ

ಕರೊನಾ ಜನಜಾಗೃತಿಗೆ ಮನವಿ

ವಿಜಯಪುರ: ಕರೊನಾ ತೊಲಗಿಸಿ ದೇಶ ಉಳಿಸಿ ಎಂದು ಘೋಷಣೆಯೊಂದಿಗೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಕುದುರೆಗಳಿಗೆ ಮಾಸ್ಕ್ ಕಟ್ಟಿ ಮಂಗಳವಾರ ಜನಜಾಗೃತಿ ಮೂಡಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಶಕ್ತಿಕುಮಾರ ಮಾತನಾಡಿ, ದೇಶಾದ್ಯಂತ ಕರೊನಾ ಹಾವಳಿ ಹೆಚ್ಚಾಗುತ್ತಿದ್ದು, ಜನ ಭಯಭೀತರಾಗಿ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಜನರಲ್ಲಿ ಧೈರ್ಯ ತುಂಬುವ ಕೆಲಸ ಜಿಲ್ಲಾಡಳಿತ ಮಾಡಬೇಕಿದೆ ಎಂದರು.
ಸರ್ಕಾರ ಆದೇಶ ನೀಡಿದಂತೆ 15 ದಿನಗಳ ಮಟ್ಟಿಗೆ ಜಾತ್ರೆಗಳು, ಮದುವೆ ಸಮಾರಂಭಗಳು ನಡೆಯುವಂತಿಲ್ಲ. ಶಾಲೆಗಳು ತೆರೆಯುವ ಹಾಗಿಲ್ಲ. ಹೀಗಿದ್ದು ಬಾರ್ ಮತ್ತು ದಾಬಾಗಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಲವಾಗಿದೆ. ಸರ್ಕಾರ ದಾಬಾ ಹಾಗೂ ಬಾರ್‌ಗಳನ್ನು ಬಂದ್ ಮಾಡಿಸಿ, ಜನರಿಗೆ ಕರೊನಾ ಹರಡದಂತೆ ಮುಂಜಾಗ್ರತೆ ವಹಿಸಬೇಕೆಂದು ಒತ್ತಾಯಿಸಿದರು.
ಮನೆ ಮನೆಗೆ ತೆರಳಿ ಕರೊನಾ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಬೇಕು. ಔಷಧ ಅಂಗಡಿಗಳಲ್ಲಿ 10 ರೂ. ಮಾಸ್ಕ್‌ನ್ನು 50 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದಕ್ಕೆ ಕಡಿವಾಣ ಹಾಕಬೇಕು. ಎಲ್ಲ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಕರೊನಾ ಕುರಿತು ಜಾಗೃತಿ ಮೂಡಿಸಲು ಮುಂದಾಗಬೇಕೆಂದು ಅವರು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರಿಫ್, ಇರ್ಫಾನ್ ಶೇಖ, ಚಂದು ಜಾಧವ, ಲಾಲಸಾಬ ಸಾವರಗೋಳ, ಸಾಗರ ಬಾಗಲಕೋಟ, ಪರಶುರಾಮ ಬಿಜಾಪುರ, ಶ್ರೀಶೈಲ ಕುಮಸಗಿ, ಯಮನಪ್ಪ ಬೂದಿಹಾಳ, ಅಶೋಕ ಹಾದಿಮನಿ, ಆನಂದ ಕಟ್ಟಿಮನಿ, ರೇಖಾ ಬಮ್ಮನಳ್ಳಿ, ರವಿ ರಾಠೋಡ, ಈಶ್ವರ ಉಮರಾಣಿ, ಗಣೇಶ ರಾಠೋಡ, ಬಾಬುಲಾಲ ಗೌಂಡಿ, ಅಕ್ಷಯ ವಿಜಯಪುರ, ಅನೀಲ ರಡ್ಡಿ ಮತ್ತಿತರರು ಉಪಸ್ಥಿತರಿದ್ದರು.