ಜಿಲ್ಲೆ

ಭಯಮುಕ್ತ ವಾತಾವರಣ ನಿರ್ಮಾಣ


ವಿಜಯಪುರ : ಕರೊನಾ ಕುರಿತು ಜನರಲ್ಲಿ ರೋಗದ ಬಗ್ಗೆ ಅರಿವಾಗಿದೆ ಹಾಗೂ ಜನ ಈ ರೋಗದಿಂದ ಭಯಮುಕ್ತರಾಗುತ್ತಿದ್ದು ಚಿಕಿತ್ಸೆಗಾಗಿ ಸ್ಪಂದಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಹೇಳಿದರು.

ನಗರದ ವಾರ್ಡ್ ನಂ.2ರಲ್ಲಿ ಭಾನುವಾರ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಂಗ್ರೆಸ್ ವತಿಯಿಂದ ಕೈಗೊಂಡ ಆರೋಗ್ಯ ಹಸ್ತ ಕಾರ್ಯಕ್ರಮದಿಂದ ಜನತೆ ಧೈರ್ಯದಿಂದ ಕರೊನಾವನ್ನು ಎದುರಿಸಿ ತಮ್ಮ ದಿನ ನಿತ್ಯದ ಜೀವನದಲ್ಲಿ ತೊಡಗಿಕೊಂಡು ಆರ್ಥಿಕ ಚೈತನ್ಯ ಕಂಡುಕೊಳ್ಳುತ್ತಿದ್ದು,ಜನರಲ್ಲಿ ನೈತಿಕ ಬಲಬಂದಂತಾಗಿದೆ. ವಿಜಯಪುರ ನಗರದಲ್ಲಿ ಕೋವಿಡ್ ಸೋಂಕು ಹತೋಟಿಗೆ ಬರುತ್ತಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಆದರೂ ಜನ ಪರಸ್ಪರ ಅಂತರ ಕಾಯ್ದುಕೊಂಡು ಮುಖಕ್ಕೆ ಮಾಸ್ಕ್ ಧರಿಸಿ ರೋಗ ಹರಡದಂತೆ ಜಾಗ್ರತೆ ವಹಿಸಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಕೋವಿಡ್-19 ಜಾಗೃತಿ ಸಮಿತಿ ಅಧ್ಯಕ್ಷ ಮಹ್ಮದ್ ರಫೀಕ್ ಟಪಾಲ್ ಮಾತನಾಡಿ, ಕರೊನಾ ಮಹಾಮಾರಿ ಇಡೀ ಜಗತ್ತಿಗೆ ಒಂದು ಕಂಟಕವಾಗಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಜನತೆ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು. ರೋಗ ಲಕ್ಷಣಗಳು ಕಂಡುಬಂದಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದರು. ಪಾಲಿಕೆ ಮಾಜಿ ಸದಸ್ಯ ಅಬ್ದುಲ್ ರಜಾಕ್ ಹೋರ್ತಿ, ನಗರಸಭೆ ಮಾಜಿ ಸದಸ್ಯ ನಬಿಲಾಲ್ ಕರಜಗಿ, ವಿಜಯಪುರ ನಗರ ಬ್ಲಾಕ್ ಅಧ್ಯಕ್ಷ ಜಮೀರ್ ಅಹ್ಮದ್ ಬಕ್ಷಿ, ಕಾಂಗ್ರೆಸ್ ಮುಖಂಡ ಶರಣಪ್ಪ ಯಕ್ಕುಂಡಿ, ಮುಖಂಡರಾದ ಆರತಿ ಶಹಾಪುರ, ಎಸ್.ಎಸ್.ಜಾಗೀರದಾರ, ವಸಂತ ಹೊನಮೊಡೆ, ಶಬ್ಬೀರ್ ಜಾಗೀರದಾರ ಇತರರು ಭಾಗವಹಿಸಿದ್ದರು.