ವಿಜಯಪುರ: ಕರೊನಾ ಮೂರನೇ ಅಲೆಯಲ್ಲಿ ಚಿಕ್ಕ ಮಕ್ಕಳು ಹೆಚ್ಚು ಬಾಧಿತರಾಗುತ್ತಾರೆ ಎಂಬ ವರದಿಗಳಿದ್ದು, ಈ ಕುರಿತಂತೆ ಚಿಕ್ಕ ಮಕ್ಕಳ ಕೋವಿಡ್ ವಿಶೇಷ ಘಟಕ ಆರಂಭಿಸಲು ಈಗಲೇ ಕ್ರಮ ಜರುಗಿಸಬೇಕೆಂದು ಬಿಎಲ್‌ಡಿಇ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಇಲ್ಲಿನ ಬಿಎಲ್‌ಡಿಇ ಡೀಮ್ಡ್ ವಿವಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿತರಾಗುವ ಕುರಿತು ವರದಿಗಳು ಬರುತ್ತಿದ್ದು, ಈಗಿನಿಂದಲೇ ಮಕ್ಕಳ ಚಿಕಿತ್ಸೆಗೆ ಹೆಚ್ಚು ನಿಗಾವಹಿಸಬೇಕು. ಯಾವ ಮಗು ಕೂಡ ಚಿಕಿತ್ಸೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವ ಸಾಮಾಜಿಕ ಜವಾಬ್ದಾರಿ ನಮ್ಮ ಮೇಲೆ ಇದೆ. ಅದರ ಅನುಸಾರ ಹೆಚ್ಚಿನ ಬೆಡ್‌ಗಳು, ಆಕ್ಸಿಜನ್ ವ್ಯವಸ್ಥೆ ಮತ್ತು ವೆಂಟಿಲೇಟರ್ ವ್ಯವಸ್ಥೆ ಮಾಡಲು ಚಿಕ್ಕಮಕ್ಕಳ ವಿಭಾಗವನ್ನು ಈಗಿನಿಂದಲೇ ಸನ್ನದ್ಧಗೊಳಿಸಬೇಕು ಎಂದು ವೈದ್ಯರಿಗೆ ಸೂಚಿಸಿದರು.
ವಿಶೇಷವಾಗಿ ಕರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಆಗುವ ತೊಂದರೆಗಳು ಮತ್ತು ಸೂಕ್ತ ಚಿಕಿತ್ಸೆ ಕುರಿತು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ತಜ್ಞ ವೈದ್ಯರೊಂದಿಗೆ ನಮ್ಮ ವೈದ್ಯರ ತಂಡ ಸಮಾಲೋಚನೆ, ಮಾಹಿತಿ, ನೆರವು ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ಸಂಘಟಿಸಬೇಕು ಎಂದರು.
ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಮಾತನಾಡಿ, ಈಗಾಗಲೇ ನಮ್ಮ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳು ಕರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರಂಭಿಕ ಹಂತದಲ್ಲಿ 60 ಆಕ್ಸಿಜನ್ ಬೆಡ್‌ಗಳನ್ನು ಸಜ್ಜುಗೊಳಿಸಲಾಗಿದೆ. ಅಗತ್ಯವಿದ್ದರೆ ಇನ್ನೂ 60ಬೆಡ್‌ಗಳಿಗೆ ವಿಸ್ತರಿಸಿ, ಒಟ್ಟು 120 ಆಕ್ಸಿಜನ್ ಸಹಿತ ಮಕ್ಕಳ ಚಿಕಿತ್ಸಾ ವಾರ್ಡ್ ಆರಂಭಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮತ್ತು ಚಿಕಿತ್ಸೆಗೆ ಅಗತ್ಯವಿರುವ ಔಷಧ ದಾಸ್ತಾನು ಸಂಗ್ರಹಿಸಲಾಗುವುದು. ಅಲ್ಲದೆ ಸರಣಿ ಕಾರ್ಯಾಗಾರಗಳನ್ನು ಏರ್ಪಡಿಸಿ, ತಜ್ಞ ವೈದ್ಯರೊಂದಿಗೆ ಮಕ್ಕಳ ತಜ್ಞರು, ಸಿಬ್ಬಂದಿ ಹಾಗೂ ತಂತ್ರಜ್ಞರನ್ನು ಸನ್ನದ್ಧಗೊಳಿಸಲಾಗುವುದು ಎಂದ ಸಭೆಗೆ ತಿಳಿಸಿದರು.