ಜಿಲ್ಲೆ

ಸ್ಪರ್ಧಾತ್ಮಕ ಪರೀಕ್ಷೆ ಕೇಂದ್ರ ಸ್ಥಾಪನೆಗೆ ಒತ್ತಾಯ

ವಿಜಯಪುರ : ವಿಜಯಪುರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ರಾಜ್ಯ ಪದವೀಧರರ ಒಕ್ಕೂಟ ವತಿಯಿಂದ ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಾಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಲಾಯಪ್ಪ ಇಂಗಳೆ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಅನೇಕ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳಿದ್ದು, ರಾಜ್ಯದ ಅನೇಕ ಜಿಲ್ಲೆಗಳಿಂದ ಅಭ್ಯರ್ಥಿಗಳು ತರಬೇತಿ ಪಡೆಯಲು ವಿಜಯಪುರಕ್ಕೆ ಆಗಮಿಸುತ್ತಾರೆ. ಆದರೆ, ಪರೀಕ್ಷೆ ಬರೆಯಲು ಧಾರವಾಡ, ಬೆಂಗಳೂರಿಗೆ ಹೋಗುವಂತಹ ಪರಿಸ್ಥಿತಿ ಇದೆ. ಇದರಿಂದಾಗಿ ವಿಜಯಪುರದಲ್ಲೇ ಸ್ಪರ್ಧಾತ್ಮಕ ಪರೀಕ್ಷೆ ಕೇಂದ್ರವನ್ನು ಸರ್ಕಾರ ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ಕೆಪಿಎಸ್‌ಸಿ, ಯುಪಿಎಸ್‌ಸಿ ಪರೀಕ್ಷೆಗಳನ್ನು ಬರೆಯಲು ಇತರ ಜಿಲ್ಲೆಗಳಿಗೆ ಹೋಗಬೇಕಾಗಿದೆ. ಆದ್ದರಿಂದ ಪರೀಕ್ಷೆ ಕೇಂದ್ರವನ್ನು ವಿಜಯಪುರದಲ್ಲಿ ಸ್ಥಾಪಿಸಲು ಜನಪ್ರತಿನಿಧಿಗಳು ಧ್ವನಿ ಎತ್ತುವ ಮೂಲಕ ಜಿಲ್ಲೆಯ ನಿರುದ್ಯೋಗಿ ಪದವೀಧರರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಸಂಘಟನೆಯ ಕಾರ್ಯಾಧ್ಯಕ್ಷ ಸಾಜೀದ ಹುಸೇನ ರಿಸಾಲದಾರ ಮಾತನಾಡಿದರು.
ಒಕ್ಕೂಟದ ಗೌರವಾಧ್ಯಕ್ಷ ದಾನೇಶ ಅವಟಿ, ನಿಂಗಪ್ಪ ಸಂಗಾಪುರ, ವಿನೋದ ಕೋಟ್ಯಾಳ ಹಾಗೂ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.