ವಿಜಯಪುರ: ಕರೊನಾ ಸೋಂಕಿತನ ಮನೆಗೆ ಹಾಲು-ಪತ್ರಿಕೆ ಬಾರದ ಹಿನ್ನೆಲೆ ಕುಟುಂಬಸ್ಥರು ತಮಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಸೇರಿದಂತೆ ಸಿಎಂ ಮತ್ತು ಪಿಎಂ ಕಚೇರಿಗೆ ಟ್ವೀಟ್ ಮಾಡಿದ್ದಾರೆ.
ಇಲ್ಲಿನ ಚಾಲುಕ್ಯ ನಗರದ ನಿವಾಸಿಯೊಬ್ಬರಿಗೆ ಕರೊನಾ ಸೋಂಕು ಹರಡಿದೆ. ಮನೆಯಲ್ಲಿ ಒಟ್ಟು ಏಳು ಜನ ಕುಟುಂಬಸ್ಥರಿದ್ದು, ಒಬ್ಬರಲ್ಲಿ ಲಕ್ಷಣಗಳು ಕಾಣಿಸಿಕೊಂಡಿವೆ. ಅವರನ್ನು ಮನೆಯ ಮೇಲ್ಮಹಡಿಯಲ್ಲಿ ಇರಿಸಲಾಗಿದೆ. ಅದಾಗ್ಯೂ ಹಾಲು-ಪತ್ರಿಕೆಯವರು ಮನೆಯತ್ತ ಸುಳಿಯುತ್ತಿಲ್ಲ. ಮನೆಗೆಲಸದವರೂ ಬರುತ್ತಿಲ್ಲ. ಇದಕ್ಕೆ ನೆರೆ-ಹೊರೆಯವರ ಕುಮ್ಮಕ್ಕು ಕಾರಣವೆಂದು ಟ್ವೀಟ್ ಮೂಲಕ ಕುಟುಂಬ ಸದಸ್ಯರು ದೂರಿದ್ದಾರೆ.
ಮನೆಗೆಲಸದವರು ಬಾರದೆ ಇರುವುದರಲ್ಲಿ ತೊಂದರೆ ಇಲ್ಲ. ಏಕೆಂದರೆ ಅವರಿಗೂ ಭಯ ಇರಬಹುದು. ಆದರೆ, ಹಾಲು -ಪತ್ರಿಕೆಯವರು ಗೇಟ್ ಹೊರಗೆ ಇಟ್ಟು ಹೋಗಬಹುದಲ್ಲ? ಎಂಬುದು ಕುಟುಂಬಸ್ಥರ ಅಳಲು.
ಸುದ್ದಿ ತಿಳಿಯುತ್ತಿದ್ದಂತೆ ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕುಟುಂಬಸ್ಥರ ಸಮಸ್ಯೆ ಆಲಿಸಿದ್ದಾರೆ. ಬಳಿಕ ಹಾಲು-ಪತ್ರಿಕೆಯವರನ್ನು ಮತ್ತು ಮನೆಗೆಲಸದವರನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಎಲ್ಲರೂ ತಮ್ಮ ಜೀವ ಭಯಕ್ಕಾಗಿ ಸ್ವಯಂ ಪ್ರೇರಣೆಯಿಂದ ಕೆಲಸ ಸ್ಥಗಿತಗೊಳಿಸಿರುವುದಾಗಿ ತಿಳಿಸಿದ್ದಾರೆ. ತಾವೂ ಸಹ ಬಡವರಿದ್ದು, ಸೋಂಕು ದೃಢಪಟ್ಟರೆ ಚಿಕಿತ್ಸೆ ಪಡೆಯುವಷ್ಟು ಸಬಲರಲ್ಲ ಎಂದು ಆಯುಕ್ತರ ಮುಂದೆ ಹೇಳಿಕೊಂಡಿದ್ದಾರೆ.
ಪರಿಸ್ಥಿತಿ ಅರಿತ ಆಯುಕ್ತ ಶ್ರೀಹರ್ಷಾ ಶೆಟ್ಟಿ ಇನ್ಮುಂದೆ ದಿನದ 24 ಗಂಟೆ ಕುಟುಂಬಸ್ಥರಿಗೆ ಬೇಕಾದ ಎಲ್ಲ ಸೌಕರ್ಯವನ್ನು ತಮ್ಮ ಸಿಬ್ಬಂದಿಯಿಂದಲೇ ಒದಗಿಸುವ ಭರವಸೆ ನೀಡಿದ್ದಾರೆ. ಹಾಲು-ಹಣ್ಣು-ತರಕಾರಿ ಸೇರಿದಂತೆ ದಿನಬಳಕೆ ಸಾಮಗ್ರಿಗಳನ್ನು ಖರೀದಿಸಲು ಪಾಲಿಕೆ ಸಿಬ್ಬಂದಿಯನ್ನು ಬಳಸಿಕೊಳ್ಳುವುದಾಗಿ ತಿಳಿಸಿ ಸಹಾಯವಾಣಿ ಸಂಖ್ಯೆ ನೀಡಿದ್ದಾರೆ. ಬಳಿಕ ಸುತ್ತಲಿನ ನಿವಾಸಿಗಳನ್ನು ಕರೆಯಿಸಿ ಯಾರೂ ಸೋಂಕಿತನ ಕುಟುಂಬ ಸದಸ್ಯರಿಗೆ ತೊಂದರೆ ಕೊಡದಂತೆ ಮತ್ತು ಅವರನ್ನು ಕೀಳಾಗಿ ಕಾಣದಂತೆ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಚಾಲುಕ್ಯ ನಗರದಲ್ಲಿ ಉಂಟಾದ ಸೋಂಕಿತ ಘಟನೆ ಅಧಿಕಾರಿಗಳ ಗಮನ ಸೆಳೆದಿದ್ದು, ಆ ಕುಟುಂಬಸ್ಥರ ಸಮಸ್ಯೆಗೆ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಚಾಲುಕ್ಯ ನಗರದ ಘಟನೆ ಗಮನಕ್ಕೆ ಬಂದಿದೆ. ಪಾಲಿಕೆ ಆಯುಕ್ತರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಮಹಾಮಾರಿ ಕರೊನಾ ಇಡೀ ಜಗತ್ತನ್ನೇ ಆವರಿಸಿಕೊಂಡಿದೆ. ಇಂಥ ಸ್ಥಿತಿಯಲ್ಲಿ ಒಂದು ಕುಟುಂಬವನ್ನು ಯಾರೂ ಗುರಿಯಾಗಿಟ್ಟುಕೊಳ್ಳದಂತೆ ತಿಳಿಹೇಳಲಾಗಿದೆ. ಹಾಲು-ಪತ್ರಿಕೆ ಸ್ಥಗಿತಗೊಳ್ಳಲು ನೆರೆಹೊರೆಯವರ ಕುಮ್ಮಕ್ಕು ಕಾರಣವೆಂಬುದು ಕುಟುಂಬಸ್ಥರ ಆರೋಪವಾಗಿತ್ತು. ಆದರೆ, ಅವರೆಲ್ಲ ಸ್ವಯಂ ಪ್ರೇರಣೆಯಿಂದ ಬಿಟ್ಟಿದ್ದಾಗಿ ತಿಳಿಸಿದ್ದಾರೆ. ಮಾನವೀಯ ನೆಲೆಗಟ್ಟಿನ ಮೇಲೆ ಸೋಂಕಿತನ ಕುಟುಂಬಸ್ಥರೊಂದಿಗೆ ವ್ಯವಹರಿಸಲು ತಿಳಿಸಲಾಗಿದೆ. ಹಾಗೊಂದು ವೇಳೆ ಬಹಿಷ್ಕಾರದಂಥ ಸ್ಥಿತಿ ಕಂಡು ಬಂದರೆ ಕ್ರಮ ಜರುಗಿಸಲಾಗುವುದು.
ಪಿ. ಸುನೀಲಕುಮಾರ, ಜಿಲ್ಲಾಧಿಕಾರಿ