ವಿಜಯಪುರ: ಹೆಣ್ಣು ಒಂದು ಅದ್ಭುತ ಶಕ್ತಿಯಾಗಿದ್ದು, ಪ್ರೀತಿ, ಮಮತೆ ಹಾಗೂ ತ್ಯಾಗದ ಪ್ರತೀಕ. ತಾಯಿಯಾಗಿ, ತಂಗಿಯಾಗಿ, ಮಗಳಾಗಿ, ಮಡದಿಯಾಗಿ ಪ್ರತಿ ಪುರುಷನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾಳೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ ಅಗರವಾಲ್ ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಮಹಿಳಾ ಮಹಾವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಂಗಾರಮ್ಮ ಸಜ್ಜನ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುರುಷರು ಕೇವಲ ಉದ್ಯೋಗ, ನೌಕರಿಯ ಬೆನ್ನುಬಿದ್ದು, ಅವುಗಳಿಗೆ ಸೀಮಿತವಾಗುತ್ತಾರೆ. ಮಹಿಳೆ ಹಾಗಲ್ಲ. ಉದ್ಯೋಗದ ಜತೆಗೆ ಮನೆ ಬೆಳವಣಿಗೆ ಹಾಗೂ ಕುಟುಂಬ ನಿರ್ವಹಣೆಯನ್ನೂ ಮಾಡುತ್ತಾಳೆ. ಅವಳು ಧೈರ್ಯದ ಪ್ರತಿಬಿಂಬ. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಶಕ್ತಿ ಅವರಲ್ಲಿ ಮಾತ್ರ ಕಾಣಲು ಸಾಧ್ಯ. ಮಹಿಳೆ ಕೇವಲ ಮನೆಗಳಿಗೆ ಸೀಮಿತವಾಗಿರದೆ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಕ್ಷೇತ್ರ ಜನಸಂಪರ್ಕ ಇಲಾಖೆ ಸಂಯೋಜಕ ಮುರಳೀಧರ ಕಾರಬಾರಿ ಮಾತನಾಡಿ, ಮಹಿಳೆಯರು ಸಮಾಜದ ಒಂದು ಭಾಗ. ಸಮಾಜದ ಬೆಳವಣಿಗೆಯಲ್ಲಿ ಅವರ ಪಾತ್ರ ಪ್ರಮುಖ. ಮಹಿಳೆಯರ ಸಮಾನತೆ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸಬೇಕೆಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಮಲಾ ಸುರಪೂರ ಮಾತನಾಡಿ, ಮಹಿಳಾ ಜಾಗೃತಿ ಕಾರ್ಯಕ್ರಮಗಳು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿರದೆ, ಹಳ್ಳಿಗಳಿಗೂ ತಲುಪಬೇಕು ಎಂದರು.
ಮಹಿಳಾ ಅಭಿವೃದ್ಧಿ ನಿಗಮದ ಸಂಯೋಜಕಿ ಭಾರತಿ ಪಾಟೀಲ ಪ್ರತಿಜ್ಞಾವಿಧಿ ಬೋಧಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಕೆ.ಕೆ. ಚವಾಣ, ಎಸ್‌ಬಿಎಸ್ ಮಹಿಳಾ ಕಾಲೇಜಿನ ಪ್ರಾಚಾರ್ಯ ಎಸ್.ಜೆ. ಪೂಜಾರಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಜಾವೇದ್ ಜಮಾದಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನೀಲ ಹಳ್ಳಿ ಮತ್ತಿತರರಿದ್ದರು.