ವಿಜಯಪುರ: ಪೊಲೀಸರಿಂದ ತನ್ನ ತಂದೆಯ ಕೊಲೆಯಾಗಿದ್ದು ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹಿಸಿ ಪೇದೆಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು ಯಲಹಂಕ ಠಾಣೆ ಹೆಡ್‌ಕಾನ್‌ಸ್ಟೆಬಲ್ ಬಸವರಾಜ ಪಾಟೀಲ ಎಂಬುವರು ಇಂಥದ್ದೊಂದು ವಿಡಿಯೋ ಹರಿಬಿಟ್ಟಿದ್ದಾರೆ. ಮೂಲತಃ ಸಿಂದಗಿ ತಾಲೂಕಿನ ಬಂಟನೂರ ಗ್ರಾಮದ ಬಸವರಾಜ ಪಾಟೀಲ ಹಣಕ್ಕಾಗಿ ಸಿಂದಗಿ ಪೊಲೀಸರು ತಮ್ಮ ತಂದೆಯನ್ನು ಕೊಲೆ ಮಾಡಿದ್ದಾಗಿ ಆರೋಪಿಸಿದ್ದಾರೆ. ಸದರಿ ಪ್ರಕರಣವನ್ನು ಸಿಬಿಐಗೆ ವಹಿಸಿ ತಮಗೆ ನ್ಯಾಯ ಕೊಡಿಸಬೇಕೆಂದು ಸಿಎಂ, ಗೃಹ ಸಚಿವ ಹಾಗೂ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರಲ್ಲಿ ಮನವಿ ಮಾಡಿದ್ದಾರೆ.
ಸಿಂದಗಿ ಪೊಲೀಸರು ನನ್ನ ಕುಟುಂಬದ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅಟ್ಟಹಾಸ ಮೆರೆದಿದ್ದು ರಾಕ್ಷಸ ಕೃತ್ಯ ಎಸಗಿದ್ದಾರೆ. ನನ್ನ ತಂದೆಯನ್ನು ಹೊಡೆದು ಕೊಲೆ ಮಾಡಿದ್ದಾರೆ. ತಾಯಿ ಮತ್ತು ಸಹೋದರನನ್ನು ಹೊಡೆದಿದ್ದಾರೆ. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ತಂದೆ ಸಾಯುವ ಮುನ್ನಾ ಡೆತ್ ನೋಟ್ ಸಹ ಬರೆದಿದ್ದು ಅದರಲ್ಲಿ, ದೌರ್ಜನ್ಯ ಎಸಗಿದ ಸಿಂದಗಿಯ ಎಂಟು ಜನ ಪೊಲೀಸರ ಹೆಸರು ಬರೆದಿದ್ದಾರೆ. ಈ ಕುರಿತು ಸೂಕ್ತ ದಾಖಲೆಗಳು, ಸಾಕ್ಷಿಗಳು ಇದ್ದರೂ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರು ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಬಸವರಾಜ ದೂರಿದ್ದಾರೆ.
ಪೊಲೀಸರಿಂದ ರಕ್ಷಣೆ ಅಸಾಧ್ಯ:
ಪೊಲೀಸರಿಂದ ರಕ್ಷಣೆ ಅಸಾಧ್ಯವಾಗಿದೆ. ರಕ್ಷಿಸಬೇಕಾದವರೇ ಶಿಕ್ಷಿಸುತ್ತಿದ್ದಾರೆ. ನಾನೊಬ್ಬ ಪೊಲೀಸ್ ಇಲಾಖೆ ನೌಕರನಾಗಿದ್ದೂ ನನ್ನ ತಂದೆ ಜೀವ ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಸಾರ್ವಜನಿಕರ ಪಾಡೇನು ಎಂದು ಅಸಹಾಯಕತೆ ವ್ಯಕ್ತಪಡಿಸಿರುವ ಬಸವರಾಜ ಪಾಟೀಲ, ನಮ್ಮ ತಂದೆ ಸಾವಿಗೆ ಹಾಗೂ ನಮ್ಮ ಕುಟುಂಬಕ್ಕೆ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರು ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.
ನನ್ನ ಮತ್ತು ನನ್ನ ಅಣ್ಣನಿಗೆ ಸಿಂದಗಿ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ. ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿ, ನೌಕರಿ ತೆಗೆಯುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಹ ಆರೋಪಿಸಿದ್ದಾರೆ.
ಈ ಬಗ್ಗೆ ‘ವಿಜಯವಾಣಿ’ಯೊಂದಿಗೆ ಮಾತನಾಡಿ ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಬಂಧುಗಳ ಜಗಳದಲ್ಲಿ ಮಧ್ಯ ಪ್ರವೇಶಿಸಿ ಪೊಲೀಸರು ನಮ್ಮ ಮೇಲೆ ಎಫ್‌ಐಆರ್ ಮಾಡಿದರು. ಹಣಕ್ಕಾಗಿ ಹೊಡಿ, ಬಡಿ ಮಾಡಿದರು. ಹೀಗಾಗಿ ನಮ್ಮ ತಂದೆ ಸಿಎಂಗೆ ಡೆತ್‌ನೋಟ್ ಬರೆದಿಟ್ಟು 2016ರಲ್ಲಿ ಸತ್ತರು. ಘಟನೆ 2008ರಿಂದ ಈ ಪ್ರಕರಣ ನಡೆಯುತ್ತಾ ಬಂದಿದೆ. ನಮ್ಮ ತಂದೆ ಸಾವಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಂಡಿಲ್ಲವೇಕೆ ಎಂದು ಕೇಳಿದ ನನ್ನ ಸಹೋದರನ ಮೇಲೆ ಇದೀಗ ರೌಡಿಶೀಟರ್ ಓಪನ್ ಮಾಡಿದ್ದಾರೆ. ಹೀಗಾಗಿ ನಮಗೆ ನ್ಯಾಯ ಒದಗಿಸಬೇಕೆಂದು ಜಾಲತಾಣದ ಮೂಲಕ ಮನವಿ ಮಾಡಿದ್ದೇನಷ್ಟೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಪೇದೆ ಹರಿಬಿಟ್ಟ ವಿಡಿಯೋ ಗಮನಕ್ಕೆ ಬಂದಿದೆ. ಈ ಬಗ್ಗೆ ಸೂಕ್ತ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. | ಅನುಪಮ್ ಅಗರವಾಲ್, ಜಿಲ್ಲಾ ಪೊಲೀಸ್ ಅಧೀಕ್ಷಕ, ವಿಜಯಪುರ