ಜಿಲ್ಲೆ

ಸರ್ಕಾರ ಸಂವೇದನೆ ಕಳೆದುಕೊಂಡಿದೆಯೇ?

ವಿಜಯಪುರ: ಹಿಂದುಳಿದ ಹಾಗೂ ಶೋಷಿತ ತಳವಾರ-ಪರಿವಾರ ಸಮುದಾಯದ ಕೂಗು ಸಿಎಂ ಯಡಿಯೂರಪ್ಪಗೆ ಕೇಳಿಸುತ್ತಿಲ್ಲವೇ? ಸರ್ಕಾರ ಕಣ್ಣು, ಕಿವಿ, ಮೂಗು ಸಂವೇದನೆಯನ್ನೇ ಕಳೆದುಕೊಂಡಿದೆಯೇ? ಸಮುದಾಯದ ನ್ಯಾಯಯುತ ಬೇಡಿಕೆ ಈಡೇರಿಸುವಲ್ಲಿ ಏನಾದರೂ ತೊಡಕಿದೆಯೇ? ಕರೊನಾದಂಥ ಸಂಕಷ್ಟದ ಮಧ್ಯೆಯೂ ಹೋರಾಟ ಮಾಡುತ್ತಿರುವ ತಳವಾರ ಸಮುದಾಯದ ಧ್ವನಿ ಕೇಳುತ್ತಿಲ್ಲವೇ? ಎಂದು ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಕಿಡಿ ಕಾರಿದ್ದಾರೆ.

ಕಳೆದ ಐದು ದಿನಗಳಿಂದ ಜಿಲ್ಲಾದ್ಯಂತ ಧರಣಿ ನಡೆಸುತ್ತಿರುವ ತಳವಾರ-ಪರಿವಾರ ಸಮುದಾಯದ ಹೋರಾಟಕ್ಕೆ ಬೆಂಬಲಾರ್ಥವಾಗಿ ಶನಿವಾರ ಬಬಲೇಶ್ವರ ತಾಲೂಕು ದಂಡಾಧಿಕಾರಿ ಕಚೇರಿ ಎದುರು ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಳವಾರ-ಪರಿವಾರ ಸಮುದಾಯದ ಬೇಡಿಕೆ ನ್ಯಾಯಯುತವಾಗಿದ್ದು ಸರ್ಕಾರ ತಕ್ಷಣ ಸ್ಪಂದಿಸಬೇಕು. ರಾಜ್ಯಾದ್ಯಂತ ಎಲ್ಲ ತಾಲೂಕು ಕೇಂದ್ರಗಳಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಈವರೆಗೂ ಸ್ಪಂದಿಸದಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು. ಜನರ ಸಮಸ್ಯೆಗೆ ಧ್ವನಿ ಆಗಬೇಕಾಗಿರುವ ಶಾಸಕರುಗಳು ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ಏನು ಮಾಡುತ್ತಿದ್ದೀರಿ ? ಪಕ್ಷಾತೀತವಾಗಿ ಎಲ್ಲರೂ ಅವರ ಬೇಡಿಕೆಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಖಡಕ್ ಸಂದೇಶ ರವಾನಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣಗೌಡ ಬಿರಾದಾರ, ಮಲ್ಲು ಮರಿಯಾನಿ, ಸಂಗಮೇಶ ಕೋಲಕಾರ, ನಾಗು ಹೊಳೆಪ್ಪನವರ ಮತ್ತಿತರರಿದ್ದರು.