ಜಿಲ್ಲೆ

ನಗೆಗಡಲಲ್ಲಿ ತೇಲಿಸಿದ ಚೌಧರಿ ಹಾಸ್ಯ


ವಿಜಯಪುರ: ಬೊಂಬೆಯಾಟ ವಯ್ಯ ಇದು ಬೊಂಬೆಯಾಟ ವಯ್ಯ, ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ, ಅಮ್ಮಯ್ಯ ಅಮ್ಮಯ್ಯ ಬಾರೆ…
ಇಂಥ ಸುಪ್ರಸಿದ್ಧ ಕನ್ನಡ ಗೀತೆಗಳ ಜೊತೆಗೆ ಮಹ್ಮದ್ ರಫಿ ಅವರ ಜನಪ್ರಿಯ ಹಾಡುಗಳಿಗೆ ಧ್ವನಿಯಾದವರು ಖ್ಯಾತ ಕಲಾವಿದ ಪ್ರಶಾಂತ ಚೌಧರಿ ಹಾಗೂ ಅವರ ಆದಿಶಕ್ತಿ ಮ್ಯೂಸಿಕ್ಸ್ ನೇತೃತ್ವದ ಕಲಾವಿದರು..ಎಕ್ಸ್‌ಪೋದಲ್ಲಿ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇಂಥ ಹಲವು ಗೀತೆಗಳು ಪ್ರೇಕ್ಷಕರನ್ನು ರಂಜಿಸಿದವು. ಅಕ್ಕಮಹಾದೇವಿ ಹಿರೇಮನಿ ಅವರ ಧ್ವನಿಯಲ್ಲಿ ಮೂಡಿಬಂದ ಏ ಮೇರೆ ವತನ ಕೆ ಲೋಗೊ ಹಾಗೂ ಕೃಷ್ಣಾ ಸಂಗಮೇಶ ಗೂಗಿಹಾಳ ಕಂಠದಲ್ಲಿ ತೇಲಿಬಂದ ಕಸ್ತೂರಿ ನಿವಾಸದ ಆಡಿಸಿ ನೋಡು ಬೀಳಿಸಿ ನೋಡು ಹಾಡುಗಳಿಗೆ ನೆರೆದವರ ಹೃದಯ ತುಂಬಿ ಬಂತು.

ಎಕ್ಸ್‌ಪೋಗೆ ಬಂದ ವಿಷ್ಣು
ಸುಮಧುರ ಸಂಗೀತ ಮಧ್ಯೆ ವಿಷ್ಣುದಾದಾ ಪ್ರತಿರೂಪ ಎನಿಸಿದ ಜ್ಯೂನಿಯರ್ ವಿಷ್ಣುವರ್ಧನ್ ಸುಧೀರ್ ಅವರು ಎಕ್ಸ್‌ಪೋ ವೇದಿಕೆಗೆ ಆಗಮಿಸುತ್ತಿದ್ದಂತೆ ಚಪ್ಪಾಳೆಗಳ ಸುರಿಮಳೆ ಕೇಳಿಬಂತು. ವಿಷ್ಣುವರ್ಧನ್ ಅವರ ಡೈಲಾಗ್‌ಗಳನ್ನು ಹೇಳಿದ ಸುಧೀರ್ ನೆರದವರಲ್ಲಿ ಸಾಹಸಸಿಂಹನ ನೆನಪು ಮರುಕಳಿಸುವಂತೆ ಮಾಡಿದರು.

ಬೊಂಬೆಯಾಟವಯ್ಯ ಹಾಡಿಗೆ ಪ್ರೇಕ್ಷಕರು ಕರತಾಡನ ಮುಗಿಲು ಮುಟ್ಟಿತು. ಪ್ರತಿ ಹಾಡಿನ ಮಧ್ಯೆ ಪ್ರಶಾಂತ ಚೌಧರಿ ಅವರ ಹಾಸ್ಯ ನೆರೆದವರನ್ನು ನಕ್ಕು ನಗಿಸಿತು. ಅದರಲ್ಲೂ ಬಿಕ್ಕಿ ಬಿಕ್ಕಿ ಮಾತನಾಡುವ ಅನುಕರಣೆಗೆ ಎಲ್ಲರೂ ಮನಸೋತರು.

ಕಿರಣಕುಮಾರ ಪೂಜಾರ, ಗಾಯಕ ನಾಸೀರ್, ಕಿರಣಕುಮಾರ ದಂದರಗಿ, ಕಿರಣರಾಜ್ ಕಗ್ಗೋಡ, ವಿನೋದಕುಮಾರ ಕಟಗೇರಿ ಅವರ ಸಂಗೀತ ಸುಧೆ ಹರಿಸಿದರೆ ಮಾಳಪ್ಪ ಲಕ್ಷ್ಮಣ ಕಾರಜೋಳ ಮಿಮಿಕ್ರಿ ಮೂಲಕ ಎಲ್ಲರನ್ನೂ ರಂಜಿಸಿದರು.

ದಿನವಿಡೀ ಉಪನ್ಯಾಸಗಳ ಸರಮಾಲೆ, ಶಿಕ್ಷಣ ಸಂಸ್ಥೆಗಳ ವಿಶೇಷ ಸೌಲಭ್ಯಗಳ ಕುರಿತು ಮಾಹಿತಿ ಪಡೆದ ಜನತೆ ಸಂಜೆ ತಂಪಾದ ವಾತಾರಣದಲ್ಲಿ ಸಂಗೀತ ಆಲಿಸಿದರು.

ಕಾರ್ಯಕ್ರಮದಲ್ಲಿ ಇಂದು

ವಿಜಯಪುರದ ಸ್ವಯಂಭೂ ಕಲಾ ಪ್ರತಿಷ್ಠಾನದ ಅಧ್ಯಕ್ಷೆ, ಭರತನಾಟ್ಯ ಕಲಾವಿದೆ ದೀಕ್ಷಾ ಭಿಸೆ ಹಾಗೂ ಅವರ ತಂಡದಿಂದ ಶನಿವಾರ ಸಂಜೆ 5ಕ್ಕೆ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಎಜ್ಯುಕೇಷನ್ ಎಕ್ಸ್‌ಪೋದಲ್ಲಿ ಮಕ್ಕಳ ಪ್ರತಿಭೆ ಪ್ರದರ್ಶನಕ್ಕೂ ಉಚಿತವಾಗಿ ಮುಕ್ತ ಅವಕಾಶ ಕಲ್ಪಿಸಲಾಗುತ್ತಿದೆ. ಗಾಯನ, ಹಾಸ್ಯ, ವಾದ್ಯ, ನೃತ್ಯ, ಭಾಷಣ, ಯೋಗಾ, ವೇಷ-ಭೂಷಣ, ಏಕ ಪಾತ್ರಾಭಿನಯ, ಮಿಮಿಕ್ರಿ, ಕರಾಟೆ, ಕವನ ವಾಚನ ಇತರ ಪ್ರತಿಭೆ ಪ್ರದರ್ಶಿಸಲು ಬಯಸುವ 5 ರಿಂದ 18 ವರ್ಷದೊಳಗಿನ ಮಕ್ಕಳು ಮಧ್ಯಾಹ್ನ 3ರಿಂದ 5ರವರೆಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಆಸಕ್ತರು ಮುಂಚಿತವಾಗಿಯೇ ಹೆಸರು ಹಾಗೂ ಪ್ರದರ್ಶಿಸುವ ಕಲೆಯ ವಿವರವನ್ನು ಮೊ.7406527299ಗೆ ಕಳಿಸಬೇಕು. ಒಬ್ಬರಿಗೆ ಒಂದೇ ಅವಕಾಶ. ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ಮಕ್ಕಳ ವಿವರಗಳನ್ನು ‘ವಿಜಯವಾಣಿ’ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.

ಪುನಿತ್ ನಮನ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ ಅವರ ಸವಿನೆನಪಿಗೆ ಎಕ್ಸ್‌ಪೋದಲ್ಲಿ ಪುನಿತ್ ರಾಜ್‌ಕುಮಾರ್ ಅಭಿನಯಿಸಿದ ಚಲನಚಿತ್ರಗಳ ಹಾಡು, ಡ್ಯಾನ್ಸ್ ಹಾಗೂ ಡೈಲಾಗ್‌ಗಳನ್ನು ಹೇಳಲು ಮುಕ್ತ ಅವಕಾಶ ಒದಗಿಸಲಾಗುತ್ತಿದೆ. ಮೇ 1ರಂದು ಮಧ್ಯಾಹ್ನ 4ರಿಂದ 6ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಒಬ್ಬರಿಗೆ ಒಂದೇ ಅವಕಾಶ ನೀಡಲಾಗುವುದು. ಪುನಿತ್ ರಾಜ್‌ಕುಮಾರ್ ಅಭಿಮಾನಿಗಳು ವಯಸ್ಸಿನ ಮಿತಿ ಇಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಆಸಕ್ತರು ಮುಂಚಿತವಾಗಿಯೇ ತಮ್ಮ ಹೆಸರು ಹಾಗೂ ಪ್ರದರ್ಶಿಸುವ ಕಲೆಯ ವಿವರವನ್ನು ಮೊ.7406527299ಗೆ ವಾಟ್ಸಪ್ ಮೂಲಕ ಕಳಿಸಬೇಕು. ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ಅಭಿಮಾನಿಗಳ ಕಲಾ ಪ್ರದರ್ಶನವನ್ನು ‘ವಿಜಯವಾಣಿ’ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.

ಆರೋಗ್ಯ ಶಿಬಿರ
ಎಕ್ಸ್‌ಪೋದ ಆರ್‌ಕೆಎಂ ಆಸ್ಪತ್ರೆ ತಜ್ಞ ವೈದ್ಯರಿಂದ ಆರೋಗ್ಯ ಉಚಿತ ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಬಿಪಿ, ಶುಗರ್ ಹಾಗೂ ಜನರಲ್ ಚೆಕಪ್ ಮಾಡಲಿದ್ದು ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಬಹುದು.