ಜಿಲ್ಲೆ

ಕೃಷಿಕರಿಗೆ ತೊಂದರೆ ಮಾಡಿದರೆ ಸಹಿಸಲ್ಲ

ವಿಜಯಪುರ: ರೈತರ ಕೃಷಿ ಬೆಳೆ ಮಾರಾಟ ಹಾಗೂ ಸರಬರಾಜುವಿಗೆ ಯಾವುದೇ ನಿರ್ಬಂಧ ಇಲ್ಲ. ಹೀಗಾಗಿ ರೈತರಿಂದ ಬರುವಂತಹ ತರಕಾರಿ, ಹಣ್ಣು, ಕೃಷಿ ಬೆಳೆಗಳನ್ನು ವರ್ತಕರಿಂದ ವ್ಯಾಪಾರಸ್ಥರಿಗೆ ಮಾರಾಟ ಮಾಡಲು ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಸೂಚಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೃಷಿ, ತೋಟಗಾರಿಕೆ ಇಲಾಖೆ, ಎಪಿಎಂಸಿ ಅಧಿಕಾರಿಗಳು ಹಾಗೂ ತರಕಾರಿ, ಹಣ್ಣು, ಲಿಂಬೆ ಹಣ್ಣು ವರ್ತಕರೊಂದಿಗೆ ಸಭೆ ನಡೆಸಿದ ಅವರು, ರೈತರ ಪಾರಂಪರಿಕ ಕೃಷಿ ಬೆಳೆ ಸೇರಿದಂತೆ ಹಣ್ಣು, ತರಕಾರಿ ಹಾಗೂ ತೋಟಗಾರಿಕೆ ಬೆಳೆಗಳ ಮಾರಾಟಕ್ಕಾಗಿ ಸಂಬಂಧಿಸಿದ ಅಧಿಕಾರಿಗಳು ರೈತರು, ವ್ಯಾಪಾರಸ್ಥರ ಮಧ್ಯೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಿ ಅವರಿಗೆ ತಕ್ಷಣ ಸ್ಪಂದಿಸುವಂತೆ ಸೂಚಿಸಿದರು.

ಲಾಕ್‌ಡೌನ್ ಹಿನ್ನೆಲೆ ಮಾರ್ಗಸೂಚಿಗಳನ್ನು ಪಾಲಿಸಿ ಕೃಷಿ ಮಾರುಕಟ್ಟೆಯಲ್ಲಿ ರೈತರಿಗೆ ತೊಂದರೆಯಾಗದಂತೆ ನೆರವಾಗಬೇಕು ಎಂದರಲ್ಲದೆ, ಕಷ್ಟಕಾಲದಲ್ಲಿ ರೈತರಿಗೆ ಸ್ಪಂದಿಸಿ ನೆರವಾಗುವಂತೆ ವರ್ತಕರು ಮತ್ತು ವ್ಯಾಪಾರಸ್ಥರಲ್ಲಿ ಅವರು ಮನವಿ ಮಾಡಿದರು.
ಲಾಕ್‌ಡೌನ್ ನೆಪದಲ್ಲಿ ರೈತರಿಗೆ ತೊಂದರೆ ಮಾಡುವುದನ್ನು ಸಹಿಸಲಾಗುವುದಿಲ್ಲ. ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ತಕ್ಷಣ ಅಪರ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಅದರಂತೆ ದೂರುಗಳಿದ್ದಲ್ಲಿ ತಮಗೂ ಸಂದೇಶ ಕಳುಹಿಸಬಹುದು. ಕೃಷಿ, ತೋಟಗಾರಿಕೆ, ಎಪಿಎಂಸಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದರು.

ನಿಗದಿತ ಸಮಯ, ನಿಗದಿತ ದರಗಳಲ್ಲಿ ಮತ್ತು ಅಗತ್ಯ ವಸ್ತುಗಳ ಮಾರಾಟ ಆಗಬೇಕು. ಮಾರುಕಟ್ಟೆಗೆ ಕೃಷಿ, ತೋಟಗಾರಿಕೆ ಬೆಳೆ, ಅಗತ್ಯ ವಸ್ತುಗಳ ಸರಬರಾಜುಗಳ ಸಂಪರ್ಕಕೊಂಡಿ ಕಡಿತವಾಗದಂತೆ ಮುನ್ನೆಚ್ಚರಿಕೆ ವಹಿಸಿ ವ್ಯಾಪಾರ-ವಹಿವಾಟು ನಡೆದು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅವರು ಸೂಚಿಸಿದರು.

ರೈತರಿಂದ ಗ್ರಾಹಕರವರೆಗೆ ಇರುವಂತಹ ಸಂಪರ್ಕ ಮತ್ತು ಮಾರುಕಟ್ಟೆಯಲ್ಲಿ ಇರುವಂತಹ ಬೆಲೆಗಳ ಬಗ್ಗೆ ಅಧಿಕಾರಿಗಳು ಸಂಪರ್ಕ ಸಾಧಿಸಿ ಪರಿಶೀಲನೆ ನಡೆಸಬೇಕು. ಎಪಿಎಂಸಿಯಲ್ಲಿ ಬರುವ ತರಕಾರಿ, ಹಣ್ಣುಗಳಿಗೆ ಯಾವುದೇ ರೀತಿಯ ನಿರ್ಬಂಧ ಇರದಂತೆ ನೋಡಿಕೊಳ್ಳಬೇಕು. ಬೆಳಗ್ಗೆ ತರಕಾರಿ ಮತ್ತು ಹಣ್ಣು ಹಂಪಲು ಮಾರಾಟಕ್ಕೆ ಅವಕಾಶವಿದ್ದು, ನಂತರ ತಳ್ಳುವ ಗಾಡಿಯ ಮೂಲಕ ಮಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಅದರಂತೆ ಹಾಪಕಾಮ್ಸ್ ವಾಹನಗಳನ್ನು ಮತ್ತು ಹಣ್ಣು-ಹಂಪಲುಗಳ ಮಾರಾಟ ವ್ಯವಸ್ಥೆಯನ್ನು ಸದೃಢಗೊಳಿಸಿ ಮನೆಮನೆಗೆ ವಾಹನಗಳ ಮೂಲಕ ಮಾರಾಟಕ್ಕೆ ಕ್ರಮ ಕೈಗೊಳ್ಳಬೇಕೆಂದರು.
ಕೃಷಿ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್, ಎಪಿಎಂಸಿ ಕಾರ್ಯದರ್ಶಿ ಕೆ.ಎಂ. ನಾಗೇಶ ಮತ್ತಿತರರಿದ್ದರು.

ಲಿಂಬೆ ಬೆಳೆಗಾರರ ಸಂಕಷ್ಟ
ಲಿಂಬೆ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಅಗತ್ಯವಿದೆ ಎಂದು ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಜಿಲ್ಲಾಡಳಿತದ ಗಮನಕ್ಕೆ ತಂದರು. ಜಿಲ್ಲೆಯಲ್ಲಿ 25000 ಬೆಳಗಾರರಿದ್ದು, 13 ಸಾವಿರ ಹೆಕ್ಟೇರ್ ಜಮೀನಿನಲ್ಲಿ ಲಿಂಬೆ ಬೆಳೆಯುತ್ತಿದ್ದಾರೆ. ಈಗ ಬೆಲೆ ಕುಸಿತದಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಬೆಂಬಲ ಬೆಲೆ, ಪರಿಹಾರ ದೊರಕಿಸಿಕೊಡಬೇಕೆಂದರು.

ರೈತರ ಉತ್ಪನ್ನಗಳನ್ನು ವರ್ತಕರು ಉತ್ತಮ ಬೆಲೆಗೆ ಖರೀದಿ ಮಾಡಬೇಕು. ಎಪಿಎಂಸಿ ವ್ಯಾಪ್ತಿಯಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸಿ ವ್ಯವಸ್ಥೆ ಸರಿಪಡಿಸಿಕೊಳ್ಳಬೇಕು. ಅದರಂತೆ ಇಲ್ಲಿಯ ಉತ್ಪನ್ನಗಳನ್ನು ಬೇರೆ ಜಿಲ್ಲೆಗಳಿಗೆ ಸರಬರಾಜು ಮಾಡಲು ಇಚ್ಛಿಸಿದಲ್ಲಿ ಅವಶ್ಯಕ ಗ್ರೀನ್ ಪಾಸ್ ಗಳಂತಹ ವ್ಯವಸ್ಥೆ ಸಹ ಮಾಡಲಾಗುವುದು. ಯಾವುದೇ ಪರಿಸ್ಥಿತಿಯಲ್ಲಿ ರೈತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು.
ಪಿ.ಸುನೀಲ್‌ಕುಮಾರ್, ಜಿಲ್ಲಾಧಿಕಾರಿ