ಜಿಲ್ಲೆ

ಕೃಷಿ ಉತ್ಪನಗಳಿಗೆ ಲಾಭದಾಯಕ ಬೆಲೆ ಘೋಷಿಸಿ

ವಿಜಯಪುರ: ಕೃಷಿ ಉತ್ಪನಗಳಿಗೆ ಲಾಭದಾಯಕ ಬೆಲೆ ಘೋಷಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಡಳಿತ ಕಚೇರಿ ಎದುರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದ ಅವರು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಮಲ್ಲನಗೌಡ ಮ. ಪಾಟೀಲ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ರೈತರ ಬದುಕು ಮಾತ್ರ ಬದಲಾಗಿಲ್ಲ. ರೈಲ್ವೆ, ರಸ್ತೆ, ವಿದ್ಯುನ್ಮಾನ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸಾಕಷ್ಟು ಸುಧಾರಣೆ ಕಂಡರೂ ಕೃಷಿ ಕ್ಷೇತ್ರ ಮಾತ್ರ ಸುಧಾರಣೆ ಕಂಡಿಲ್ಲ. ಮಾನವ ಮಂಗಳನ ಅಂಗಳದವರೆಗೆ ತಲುಪಿದರೂ ಭೂಮಿ ಮೇಲೆ ಅದರಲ್ಲೂ ಭಾರತದಲ್ಲಿ ಕೃಷಿಕರ ಬದುಕು ಬದಲಾಗದಿರುವುದು ದುರಂತವೇ ಸರಿ ಎಂದರು.

ಜೀವನಕ್ಕೆ ಅತ್ಯವಶ್ಯಕವಾಗಿ ಬೇಕಾದ ಆಹಾರ ಉತ್ಪಾದಿಸುವ ಕೃಷಿ ಕ್ಷೇತ್ರ ದುಃಸ್ಥಿತಿಯಲ್ಲಿದೆ. 1990 ದಶಕದಿಂದ 3.5 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ದಾರಿ ಹಿಡಿದ್ದಾರೆ. ಪ್ರತಿ ವರ್ಷ ಕೃಷಿ ತ್ಯಜಿಸಿ, ನಗರದತ್ತ ಸಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ರೈತರು ತಾವು ಬೆಳೆದ ಒಳಸುರಿಗಳ ವೆಚ್ಚ ಅಧಿಕವಾಗಿ ಪ್ರಗತಿ ವಿಕೋಪದಿಂದ ನಷ್ಟ ಉಂಟಾಗಿ ಲಾಭದಾಯಕ ಬೆಲೆ ಸಿಗದ ಕಾರಣ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದರು.

ರೈತರ ಆದಾಯ ದ್ವಿಗುಣಗೊಳಿಸಬೇಕೆಂಬುದು ಸರ್ಕಾರದ ಒಳ್ಳೆಯ ಚಿಂತನೆವೇ ಸರಿ. ಆದರೆ ಸರ್ಕಾರ ಕೇವಲ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸದರೆ ಸಾಲದು. ರೈತನ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಬೇಕು. ಖರೀದಿಯ ಖಚಿತತೆ ನೀಡಬೇಕು. ಘೋಷಿತ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಯಾಗಬಾರದು ಎಂದರು.

ಗುರುನಾಥ ಬಗಲಿ ಮಾತನಾಡಿ, ಜಿಲ್ಲೆಯ ಮಹತ್ವಾಕಾಂಕ್ಷಿ ಶ್ರೀ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದರು.

ಮಹಿಬೂಬ ಮುಲ್ಲಾ, ಅಶೋಕಗೌಡ ಪಾಟೀಲ, ಸುಭಾಸ ಚಟ್ಟರಕಿ, ಎಸ್.ಎಂ. ಬಿರಾದಾರ, ಶರಣಪ್ಪ ಭೈರಗೊಂಡ, ಅಶೋಕ ಭೈರಗೊಂಡ, ಮಹೇಶ ಮೊಸಲಗಿ, ರಿಜವಾನ ಜಹಾಗೀರದಾರ, ಎಂ.ಪಿ. ಮಡಗೊಂಡ, ನಾಗೇಶ ಹೆಗಡಿಹಾಳ, ಅಂಬಣ್ಣ ಖಷ್ಕಿ, ಶಾಂತಪ್ಪ ಖಷ್ಕಿ ಮತ್ತಿತರರಿದ್ದರು.