ಜಿಲ್ಲೆ

ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲು ಆಗ್ರಹ

ವಿಜಯಪುರ: ಡ್ರಗ್ಸ್ ಮಾಫಿಯಾ ವಿರುದ್ಧ ಕಠಿಣ ಕಾನೂನು ರೂಪಿಸಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪತ್ರ ಚಳವಳಿ ಮೂಲಕ ಮುಖ್ಯಮಂತ್ರಿಗೆ ಒತ್ತಾಯಿಸಿದರು. ನಗರದ ಅಂಚೆ ಕಚೇರಿಯ ಹತ್ತಿರ ಶನಿವಾರ ಮಳೆ ನಡುವೆಯೂ ಚಳವಳಿ ನಡೆಸಿದರು.

ಪ್ರಾಂತ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮಿಸೆ ಮಾತನಾಡಿ, ಮಾದಕ ವಸ್ತುಗಳ ಬಳಕೆ ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ವ್ಯಾಪಿಸಿದೆ. ಈ ಜಾಲಕ್ಕೆ ಶಾಲೆ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಮುಗ್ಧ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದು ಭವಿಷ್ಯದ ದೃಷ್ಠಿಯಿಂದ ಅಪಾಯಕಾರಿ. ಡ್ರಗ್ಸ್ ದಂಧೆಯಲ್ಲಿ ಬಹು ಪ್ರಭಾವಿಗಳು ಭಾಗಿಯಾಗಿರುವುದರಿಂದ ಅಂಥವರನ್ನು ಮಟ್ಟ ಹಾಕುವ ಸವಾಲು ರಾಜ್ಯ ಸರ್ಕಾರದ ಮುಂದಿದೆ. ಇದಕ್ಕಾಗಿ ಪ್ರಬಲವಾದ ಕಾನೂನು ರೂಪಿಸುವುದೊಂದೇ ಪರಿಹಾರ ಎಂದರು.

ರಾಜ್ಯ ಸಹ-ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿದರು. ನಗರ ಸಂಘಟನಟನಾ ಕಾರ್ಯದರ್ಶಿ ಬ್ರಹ್ಮಾನಂದ ಚಿತ್ರಗಾರ, ನಗರ ಸಹ-ಕಾರ್ಯದರ್ಶಿ ಅಕ್ಷಯ ಯಾದವಾಡ, ಮಂಜುನಾಥ ಹತ್ತಿ, ವಿಜಯಕುಮಾರ ಕೊಟ್ಟರಗಸ್ತಿ, ಆನಂದ ಕುಂಬಾರ, ಚೇತನ ಮಠ್, ಮಾಳಿಂಗರಾಯ ಮತ್ತಿತರರಿದ್ದರು.