ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡುವಂತೆ ಜಿಲ್ಲಾ ಕುರುಬರ ಸಂಘ, ರಾಯಣ್ಣ ಯುವ ಸೇನೆ ಹಾಗೂ ಹಾಲುಮತ ಸಮಾಜದ ವಿವಿಧ ಸಂಘಟನೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.  
ಜಿಲ್ಲೆ

ಗೃಹಸಚಿವರ ರಾಜೀನಾಮೆಗೆ ವಿಜಯಪುರ ಜಿಲ್ಲಾ ಕುರುಬರ ಸಂಘ ಅಗ್ರಹ

ವಿಜಯಪುರ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡುವಂತೆ ಜಿಲ್ಲಾ ಕುರುಬರ ಸಂಘ, ರಾಯಣ್ಣ ಯುವ ಸೇನೆ ಹಾಗೂ ಹಾಲುಮತ ಸಮಾಜದ ವಿವಿಧ ಸಂಘಟನೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಸಂಗೊಳ್ಳಿ ರಾಯಣ್ಣ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ದೇವಕಾಂತ ಬಿಜ್ಜರಗಿ ಮಾತನಾಡಿ, ವಿಧಾನಸಭೆ ವಿರೋಧ ಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನದ ಜೊತೆಗೆ ಅವರನ್ನು ಗುರಿಯಾಗಿಸಿ ಅವರ ವಾಹನದ ಮೇಲೆ ಮೊಟ್ಟೆಗಳನ್ನು ಎಸೆದು ಗುಂಡಾಗಳ ರೀತಿ ವರ್ತಿಸಿರುವ ಘಟನೆಯಿಂದ ರಾಜ್ಯದ ಜನತೆಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಹ ಕೃತ್ಯ ನಡೆಯುವ ಸಾಧ್ಯತೆ ಮಡಿಕೇರಿ ಪೊಲೀಸ್ ಇಲಾಖೆಗೆ ಮೊದಲೇ ಮಾಹಿತಿ ಇದ್ದರೂ, ಯಾವುದೇ ಕ್ರಮ ಜರುಗಿಸದೆ ಕರ್ತವ್ಯ ಲೋಪವೆಸಗಿದ ಪೊಲೀಸ್ ವರಿಷ್ಠಾಧಿಕಾರಿಯನ್ನು ದೀರ್ಘ ರಜೆ ಮೇಲೆ ಕಳಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ರಾಜು ಕಂಬಾಗಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಂತಾಗಿದೆ. ಆದ್ದರಿಂದ ಗೃಹ ಸಚಿವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿದರು.

ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ಬೀರಪ್ಪ ಜುಮನಾಳ, ಪ್ರಭಾವತಿ ನಾಟಿಕಾರ್, ಮೋಹನ್ ಮೇಟಿ, ಬಂದಗಿ ಸಾಬ್ ಗಸ್ತಿ, ಗುರುನಗೌಡ ಪಾಟೀಲ್, ಸುರೇಶ್ ಮಸೂತಿ, ಸತೀಶ್ ಅಡವಿ, ಬಸವರಾಜ್ ಕಂಕಣವಾಡಿ, ಬಸವರಾಜ್ ಕಾತ್ರಾಳ, ಸಿದ್ದು ಗೌಡನವರ್, ಮಾಳಪ್ಪ ಗೂಗ್ದಡ್ಡಿ, ಡಿ.ಬಿ.ಹಿರೆಕುರುಬರ ,ಅರವಿಂದ ಡೋಣೂರ, ಹೇಮಕಾಂತ್ ಬಿಜ್ಜರಗಿ, ಅಶೋಕ್ ಬಿಜ್ಜರಗಿ, ಚಂದ್ರಶೇಖರ್ ತೋಳಮಟ್ಟಿ. ಸತೀಶ್ ವಾಲಿಕಾರ್, ಮಲ್ಲು ಪರಸನ್ನವರ್, ಶಿವಾನಂದ ಸಿಂದಗಿ ಮುಂತಾದವರು ಭಾಗವಹಿಸಿದ್ದರು.