ಕಮಲಾಪುರ ಕೆರೆತಾಂಡಾ ಸರ್ಕಾರಿ ಶಾಲೆಯ ಶಿಕ್ಷಕಿ ಅನ್ನಪೂರ್ಣ ದೇವಿ ಅವರ ಸ್ವಯಂ ನಿವೃತ್ತಿ ಹಿನ್ನಲೆಯಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವಿಸಲಾಯಿತು. 
ವಿಜಯನಗರ

ಶಿಕ್ಷಕ ವೃತ್ತಿ ಪರಮಾತ್ಮ ನೀಡಿದ ಪ್ರಸಾದ

ಕೆರೆತಾಂಡಾ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಸ್ವಯಂ ನಿವೃತ್ತಿ ಪಡೆದ ಶಿಕ್ಷಕಿ ಅನ್ನಪೂರ್ಣ ದೇವಿ ಅನ್ನಪೂರ್ಣ ದೇವಿ ಕರೆ

*

ಹೊಸಪೇಟೆ:

ಲೌಕಿಕ ಆಸ್ತಿಗಿಂತ ಅಂತರಂಗದ ನೆಮ್ಮದಿಯೇ ಶಾಶ್ವತ. ಕರ್ತವ್ಯ ಮುಗಿದ ತೃಪ್ತಿಯಲ್ಲಿ ಕುಟುಂಬ ಮತ್ತು ಅಧ್ಯಾತ್ಮಕ್ಕಾಗಿ ನಿವೃತ್ತಿಯ ಹೆಜ್ಜೆ ಇಡುತ್ತಿದ್ದೇನೆ ಎಂದು ಸ್ವಯಂ ನಿವೃತ್ತಿ ಪಡೆದ ಶಿಕ್ಷಕಿ ಅನ್ನಪೂರ್ಣ ದೇವಿ ಹೇಳಿದರು.

ತಾಲ್ಲೂಕಿನ ಕಮಲಾಪುರ ಕೆರೆತಾಂಡ ಸರ್ಕಾರಿ ಶಾಲೆಯ ಶಿಕ್ಷಕಿ ಅನ್ನಪೂರ್ಣ ದೇವಿ ಅವರ ಸ್ವಯಂ ನಿವೃತ್ತಿ ಹಿನ್ನಲೆಯಲ್ಲಿ ಶಾಲಾ ಆವರಣದಲ್ಲಿ ಮಂಗಳವಾರ ಬೀಳ್ಕೊಡುಗೆ ಸಮಾರಂಭದಲ್ಕಿ ಮಾತನಾಡಿದರು.

ಶಿಕ್ಷಕ ವೃತ್ತಿ ಪರಮಾತ್ಮ ನೀಡಿದ ಪ್ರಸಾದವಿದ್ದಂತೆ. ಇಲಾಖೆಯ ಒತ್ತಡಗಳಿದ್ದರೂ ಮಕ್ಕಳ ಭವಿಷ್ಯಕ್ಕಾಗಿ ಕಳೆದ 23 ವರ್ಷಗಳ ಕಾಲ ಯಾವುದೇ ಕುಂದು ಬಾರದಂತೆ, ಅತ್ಯಂತ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ. ಶಾಲೆ ಹಾಗೂ ಸಾರ್ವಜನಿಕರಿಂದ ದೊರೆತ ಪ್ರೀತಿ-ವಿಶ್ವಾಸವೇ ನನ್ನ ಬದುಕಿನ ದೊಡ್ಡ ಆಸ್ತಿ ಎಂದು ಭಾವುಕರಾಗಿ ಸ್ಮರಿಸಿದರು.

ಕೇವಲ ಮನೆ, ಆಸ್ತಿ ಗಳಿಸುವುದೇ ಜೀವನವಲ್ಲ. ಲೌಕಿಕ ಉಪಜೀವನದ ಜತೆಗೆ ಮನುಷ್ಯ ಅಂತರಂಗದ ಸಂಪತ್ತನ್ನು ಮಾಡುವುದು ಮುಖ್ಯ. ಯಾವುದೇ ಬಾಹ್ಯ ಒತ್ತಡವಿಲ್ಲದೆ, ಸಂಪೂರ್ಣ ಆತ್ಮತೃಪ್ತಿಯಿಂದ ಸ್ವಯಂ ನಿವೃತ್ತಿ ಪಡೆಯುತ್ತಿದ್ದೇನೆ. ಇನ್ನುಳಿದ ಬದುಕನ್ನು ಅಧ್ಯಾತ್ಮ ಚಿಂತನೆ, ವೈಯಕ್ತಿಕ ಬೆಳವಣಿಗೆ ಹಾಗೂ ಕುಟುಂಬದೊಂದಿಗೆ ಕಾಲ ಕಳೆಯಲು ಮೀಸಲಿಡಲಿದ್ದೇನೆ ಎಂದು ಹೇಳಿದರು.

ಅನ್ನಪೂರ್ಣ ದೇವಿ ಅವರ ನಿವೃತ್ತಿಯ ಸುದ್ದಿ ತಿಳಿಯುತ್ತಿದ್ದಂತೆ ಶಾಲಾ ಮಕ್ಕಳು ಕಣ್ಣೀರಿಟ್ಟು ಭಾವುಕರಾದರು. ತಾಯಿಯಂತೆ ಪ್ರೀತಿಯಿಂದ ವಿದ್ಯಾದಾನ ಮಾಡಿದ ನೆಚ್ಚಿನ ಗುರುಗಳನ್ನು ತಬ್ಬಿಕೊಂಡು ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ನೆರೆದಿದ್ದವರು ಕಣ್ಣಾಲಿಗಳನ್ನೂ ತೇವಗೊಳಿಸಿತು. ಕಷ್ಟಪಟ್ಟು ತಮ್ಮ ಕಣ್ಣೀರನ್ನು ತಡೆದುಕೊಂಡ ಶಿಕ್ಷಕಿ, ಪ್ರತಿಯೊಬ್ಬ ಮಗುವಿಗೂ ಪ್ರೀತಿಯಿಂದ ಸಮಾಧಾನಪಡಿಸಿ, ಆಶೀರ್ವದಿಸಿ ವಿದಾಯ ಹೇಳಿದರು.

ತಾಂಡಾದ ನಾಯಕ ಜಾನ್ಯನಾಯ್ಕ, ಎಸ್ಡಿಎಂಸಿ ಅಧ್ಯಕ್ಷ ಎಸ್‌.ಎಸ್‌.ನಾಯ್ಕ, ಉಪಾಧ್ಯಕ್ಷೆ ಲಕ್ಷ್ಮೀ ಬಾಯಿ, ಪುರಸಭೆ ಮಾಜಿ ಸದಸ್ಯೆ ಜ್ಯೋತಿಬಾಯಿ, ಶಿಕ್ಷಕರಾದ ಮುಖ್ಯಶಿಕ್ಷಕಿ ಸಂಕ್ರಾಂತಿ, ಬಿ.ಎನ್.ಶಿಲ್ಪಾ, ಎಂ.ಶಿಲ್ಪಾ, ಗುರುಬಸವರಾಜ್, ಕೆ‌.ಬಸವಾರಜ್, ಕಡ್ಲಿ ವೀರಭದ್ರೇಶ, ಬಸವರಾಜ್, ಶಿವಕುಮಾರ್, ಸೋಮಶೇಖರ್ ಇತರರಿದ್ದರು.