ವಿಜಯಪುರ ಹೊರ ವಲಯದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ತಾಲೂಕು ಮಟ್ಟದ ಯುವ ಸಂಸತ್ ಕಾರ್ಯಕ್ರಮ ನಡೆಯಿತು. ಮಹೇಶ ಪೋತದಾರ, ಪ್ರಶಾಂತ ಚನಗೊಂಡ, ಗುರುಶಾಂತ ಬೆಳ್ಳುಂಡಗಿ ಮತ್ತಿತರರಿದ್ದಾರೆ. 
ವಿಜಯನಗರ

ಪ್ರಜಾಪ್ರಭುತ್ವ ಮೌಲ್ಯಅರಿತುಕೊಳ್ಳಲಿ

ಉಪನಿರ್ದೇಶಕ ಮಹೇಶ ಪೋತದಾರ ಅಭಿಮತ ಯುವ ಸಂಸತ್ ಕಾರ್ಯಕ್ರಮ

ವಿಜಯಪುರ: ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಮಹತ್ವ, ಸಂವಿಧಾನದ ಆಶಯಗಳು ಹಾಗೂ ಸಂಸದೀಯ ವ್ಯವಸ್ಥೆಯ ಕಾರ್ಯವೈಖರಿಯನ್ನು ಅರಿತುಕೊಂಡು ಜವಾಬ್ದಾರಿಯುತ ನಾಗರಿಕರಾಗುಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಹೇಳಿದರು.

ನಗರ ಹೊರ ವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜಯಪುರ ತಾಲೂಕು ಮಟ್ಟದ ಯುವ ಸಂಸತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ನಾಯಕತ್ವದ ಗುಣಗಳು ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚಿಸುವ ಮನೋಭಾವ ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು.

ಯುವ ಸಂಸತ್‌ನಲ್ಲಿ ವಿದ್ಯಾರ್ಥಿಗಳು ನಡೆಸಿದ ಚರ್ಚೆ, ಪ್ರಶ್ನೋತ್ತರ ಹಾಗೂ ಸಂಸದೀಯ ಕಲಾಪದ ಪ್ರಸ್ತುತಿಯನ್ನು ಗಮನಿಸಿದಾಗ, ಇದು ಕೇವಲ ಅಣಕು ಸಂಸತ್ತಿನಂತೆ ಕಾಣದೆ ನೈಜ ಸಂಸತ್‌ನ ಕಲಾಪವೇ ನಡೆಯುತ್ತಿರುವ ಅನುಭವವಾಯಿತು. ವಿದ್ಯಾರ್ಥಿಗಳು ಸಂವಿಧಾನ ನೀಡಿರುವ ಹಕ್ಕುಗಳ ಜತೆಗೆ ತಮ್ಮ ಕರ್ತವ್ಯಗಳನ್ನೂ ಅರಿತುಕೊಳ್ಳಬೇಕು. ಅಲ್ಲದೆ, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಪರಸ್ಪರ ಗೌರವದಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಪ್ರಶಾಂತ ಚನಗೊಂಡ ಮಾತನಾಡಿ, ವಿದ್ಯಾರ್ಥಿಗಳು ಯುವ ಸಂಸತ್‌ನಲ್ಲಿ ಅತ್ಯುತ್ತಮವಾಗಿ ಭಾಗವಹಿಸಿರುವುದು ಸಂತಸದ ಸಂಗತಿ. ಈ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ವಿಜಯಪುರ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಹಾರೈಸಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಯುವ ಸಂಸತ್‌ನಲ್ಲಿ ವಿವಿಧ ಕಾಲೇಜುಗಳ 195 ವಿದ್ಯಾರ್ಥಿಗಳು ಭಾಗವಹಿಸಿ, ಸಂಸದೀಯ ಕಲಾಪದ ಮಾದರಿಯನ್ನು ಪ್ರಸ್ತುತಪಡಿಸಿದರು.

ತಾ.ಪಂ. ಇಒ ಗುರುಶಾಂತ ಬೆಳ್ಳುಂಡಗಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಜಿ. ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ ಹೊಸೂರ, ಸಹಾಯಕ ನಿರ್ದೇಶಕ ಬಿ.ಜೆ. ಇಂಡಿ, ಮಹಿಳಾ ವಿವಿಯ ಜ್ಯೋತಿ, ಶಿವಾನಂದ ಜಮಾದಾರ ಮತ್ತಿತರರಿದ್ದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಶಿವಾನಂದ ಜಮಾದಾರ ವಂದಿಸಿದರು.