ತಿಕೋಟಾದಲ್ಲಿ ವಿಜ್ಞಾನ ಮೇಳಕ್ಕಾಗಿ ಸಿದ್ಧಗೊಳ್ಳುತ್ತಿರುವ ಪೆಂಡಾಲ್. 
ವಿಜಯನಗರ

ತಿಕೋಟಾದಲ್ಲಿ ‘ವಿಜ್ಞಾನ ಜಾತ್ರೆ’ಗೆ ಭರ್ಜರಿ ತಯಾರಿ

ಬಿಎಲ್ಡಿಇ ಸಂಸ್ಥೆ, ಅಗಸ್ತ್ಯ ಫೌಂಡೇಶನ್ ಸಹಯೋಗ

ವಿಜಯಪುರ : ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ನ. 14ರಂದು ತಿಕೋಟಾದಲ್ಲಿ ನಡೆವ ಮಕ್ಕಳ ‘ವಿಜ್ಞಾನ ಜಾತ್ರೆ’ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆದಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸೇರಿ ರಾಜ್ಯದ ಹಲವು ಗಣ್ಯರು, ಸಂಶೋಧಕರು ಪಾಲ್ಗೊಳ್ಳುವ ಈ ಮೇಳದಲ್ಲಿ ಸುಮಾರು ಹತ್ತು ಸಾವಿರ ಜನ ಸೇರುವ ನಿರೀಕ್ಷೆಯಿದ್ದು, ಅಷ್ಟು ಜನರಿಗಾಗಿ ಬೃಹತ್ ಜರ್ಮನ್ ಪೆಂಡಾಲ್ ಹಾಕಲಾಗುತ್ತಿದೆ. ಇದಕ್ಕಾಗಿ ನೂರಾರು ಕಾರ್ಮಿಕರು ಕಳೆದ ಎರಡು ದಿನದಿಂದ ಕೆಲಸ ಮಾಡುತ್ತಿದ್ದಾರೆ. ಇನ್ನೂರು ಸ್ಟಾಲ್‌ಗಳನ್ನು ಹಾಕಲಾಗುತ್ತಿದೆ. ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಪದಾಧಿಕಾರಿಗಳು, ಪಾಲಕರು ಮತ್ತು ಜನತೆ ಈ ಅಪರೂಪದ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ (ಗ್ರಾಮೀಣ ವಲಯ), ಪ್ರತಿಷ್ಠಿತ ಬಿಎಲ್ಡಿಇ ಸಂಸ್ಥೆ ಮತ್ತು ಅಗಸ್ತ್ಯ ಫೌಂಡೇಶನ್ ಸಹಯೋಗದಲ್ಲಿ ಈ ವಿಜ್ಞಾನ ಜಾತ್ರೆ ನಡೆಯಲಿದೆ. ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಮತ್ತು ಸಂಶೋಧನಾ ಶಕ್ತಿಯನ್ನು ಹೆಚ್ಚಿಸುವ ಮಹತ್ತರ ಉದ್ದೇಶದಿಂದ ಇದನ್ನು ನಡೆಸಲಾಗುತ್ತಿದೆ. ಮಕ್ಕಳು ತಮ್ಮ ನವೀನ ಆವಿಷ್ಕಾರಗಳ ಮಾದರಿಯನ್ನು ಪ್ರದರ್ಶಿಸಲು ಇದು ಸಹಕಾರಿಯಾಗಲಿದ್ದು, ಗ್ರಾಮೀಣ ಭಾಗದ ಅತಿ ದೊಡ್ಡ ವಿಜ್ಞಾನ ಜಾತ್ರೆ ಇದಾಗಲಿದ್ದು, ಸಚಿವರಾದ ಎಂ.ಬಿ. ಪಾಟೀಲರ ಮುತುವರ್ಜಿ ಮತ್ತು ಆಲೋಚನೆಯಂತೆ ಅದನ್ನು ಮಕ್ಕಳಿಗಾಗಿ ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 9ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಮಧ್ಯಾಹ್ನ 12ಕ್ಕೆ ಸಚಿವರು ಸೇರಿ ಅನೇಕ ಗಣ್ಯರು ಭಾಗಿಯಾಗುವ ಸಾರ್ವಜನಿಕ ಸಭೆ ನಡೆಯಲಿದೆ. ಸೇರುವ ಅಷ್ಟೂ ಜನಕ್ಕೆ ವಿವಿಧ ಖಾದ್ಯಗಳ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

200ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದು, ವಿಜ್ಞಾನ ಪ್ರದರ್ಶನ ನಡೆಸುವ ಮಕ್ಕಳಿಗೆ ಹೆಚ್ವಿನ ಮೊತ್ತದ ಬಹುಮಾನ ನೀಡಲಾಗುತ್ತದೆ. ಹಾಗೆಯೇ ಪವಾಡ ಬಯಲು ಕಾರ್ಯಕ್ರಮ ಕೂಡ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಅಂದು ಇಡೀ ದಿನ ಡೊಳ್ಳಿನ ಪದ, ಭಜನೆ ಪದ, ಭರತ ನಾಟ್ಯ, ನಾನಾ ನೃತ್ಯ, ಹಾಡು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಬರುವ ಮಕ್ಕಳಿಗೆ ವಾಹನ ಸೌಕರ್ಯವೂ ಮಾಡಲಾಗಿದೆ.