ಹೂವಿನಹಡಗಲಿಯ ಹಿಂದೂ ಮಹಾಗಣಪತಿ ಹಾಗೂ ಕೊರವರ ಓಣಿಯ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಅಂಗವಾಗಿ ಭಾನುವಾರ ಪೊಲೀಸ್ ಇಲಾಖೆಯಿಂದ ಪಥಸಂಚಲನ ನಡೆಯಿತು. 
ವಿಜಯನಗರ

ಖಾಕಿ ಕೋಟೆಯಲ್ಲಿ ಕೊರವರ ಓಣಿ ಗಣೇಶ ವಿಸರ್ಜನೆ

ಹೂವಿನಹಡಗಲಿ: ಪಟ್ಟಣದ ಕೊರವರ ಓಣಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಯನ್ನು ಸೋಮವಾರ ಇಸ್ಲಾಂಪೇಟೆ ಮಾರ್ಗವಾಗಿ ಮೆರವಣಿಗೆ ನಡೆಸಿ, ನಂತರ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆಯೊಂದಿಗೆ ಸೇರಿಸಿ ವಿಸರ್ಜಿಸಲಾಗುತ್ತದೆ.

ಸೆ.18ರ ಶುಕ್ರವಾರದಂದು ನಡೆದ ಮೆರವಣಿಗೆ ಇಸ್ಲಾಂಪೇಟೆಗೆ ಪ್ರವೇಶಿಸದಂತೆ ಅಲ್ಲಿನ ಸ್ಥಳೀಯರು ಪ್ರತಿಭಟಿಸಿದ್ದರಿಂದ ಮೆರವಣಿಗೆ ಮಾರ್ಗ ಬದಲಿಸಬೇಕಾಗಿ ಬಂದಿತ್ತು. ಬಳಿಕ ಉಂಟಾದ ಕೋಮು ವೈಮನಸ್ಯವನ್ನು ಶಮನಗೊಳಿಸಲು ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಎರಡೂ ಸಮುದಾಯಗಳೊಂದಿಗೆ ಪ್ರತ್ಯೇಕ ಶಾಂತಿ ಸಭೆ ನಡೆಸಿತು. ಗಣೇಶ ಮೂರ್ತಿಯನ್ನು ಮರುಪ್ರತಿಷ್ಠಾಪಿಸಿ, ಅದೇ ಮಾರ್ಗದಲ್ಲಿ ಮೆರವಣಿಗೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 20ರಂದು ಕೊರವರ ಓಣಿಯಲ್ಲಿ ಗಣೇಶ ಮೂರ್ತಿಯನ್ನು ಮರುಪ್ರತಿಷ್ಠಾಪಿಸಲಾಗಿತ್ತು.

ಈ ಘಟನೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದರಿಂದ, ಸೋಮವಾರ ನಡೆಯಲಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಾಗೂ ಕೊರವರ ಓಣಿಯ ಗಣೇಶ ವಿಸರ್ಜನಾ ಮೆರವಣಿಗೆಯನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಸ್ಪಿ, ಡಿವೈಎಸ್ಪಿ, ಸಿಪಿಐ, ಪಿಎಸ್‌ಐ, ಎಎಸ್‌ಐ ಸೇರಿದಂತೆ ಗೃಹರಕ್ಷಕ ದಳ, ಮೂರು ಡಿಆರ್ ಹಾಗೂ ಮೂರು ಐಆರ್‌ಬಿ ತುಕಡಿಗಳು ಸೇರಿದಂತೆ ಒಟ್ಟು 608 ಪೊಲೀಸ್ ಸಿಬ್ಬಂದಿಯ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.

ಎಸ್ಪಿ ಎಸ್.ಜಾಹ್ನವಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಭಾನುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ವಾಹನಗಳು ಹಾಗೂ ಸಿಬ್ಬಂದಿಯೊಂದಿಗೆ ಆಕರ್ಷಕ ಪಥಸಂಚಲನ ನಡೆಸಲಾಯಿತು. ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಶೋಭಾಯಾತ್ರೆ ಸಾಗುವ ವೇಳೆ ಸಾರ್ವಜನಿಕ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.