ಕಾನಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಕಾನಹೊಸಹಳ್ಳಿ: ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಬಡವರಾಗಿರುವುದರಿಂದ ಅವರ ಭಾವನೆಗಳಿಗೆ ಅನುಗುಣವಾಗಿ ಸಹಾನುಭೂತಿಯಿಂದ ಆರೋಗ್ಯ ಸಿಬ್ಬಂದಿ ವರ್ತಿಸಬೇಕೆಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು. ಪ್ರತಿಯೊಂದು ಜೀವವೂ ಮುಖ್ಯವಾಗಿದ್ದು, ಆರೋಗ್ಯದ ಕುರಿತು ಕಾಳಜಿ ತೋರಿಸಬೇಕು. ಜೀವ ಮತ್ತು ಜೀವನ ಸುಧಾರಣೆಯಾಗಬೇಕೆಂಬುದು ನನ್ನ ಉದ್ದೇಶವಾಗಿದೆ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಅಪಘಾತಗಳು ಹೆಚ್ಚು ಸಂಭವಿಸುತ್ತವೆ. ಜವಾಬ್ದಾರಿ ಅರಿತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಹೇಳಿದರು.
ಆರೋಗ್ಯ ಇಲಾಖೆ ಸಿಬ್ಬಂದಿ ಕುಂದು, ಕೊರತೆಯನ್ನು ಶಾಸಕರು ಕೇಳಿದರು. ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ಬಿ.ಷಣ್ಮುಖನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರದೀಪ್, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಡಾ.ವಿಶ್ವನಾಥ, ಡಾ.ಚಿರಂಜೀವಿ, ಡಾ.ಪವನಕುಮಾರ್, ಡಾ.ಬಸವೇಶ ಹಿರೇಮಠ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಗದೀಶ್ ಇದ್ದರು.