ಹಂಪಿಯಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಪ್ರವಾಸಿಗರು. 
ವಿಜಯನಗರ

ಏನ್ ಬಿಸಿಲಪ್ಪಾ ಇದು !

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಕಲ್ಯಾಣ ಕರ್ನಾಟಕದಲ್ಲಿ 42 ಡಿಗ್ರಿ ದಾಖಲು
  • ಏಪ್ರಿಲ್‌ನಲ್ಲೇ ದಾಖಲೆ ಉಷ್ಣಾಂಶ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ವಿಜಯನಗರ ಜಿಲ್ಲೆ ಸೇರಿದಂತೆ ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ಝಳ ಮಿತಿ ಮೀರಿದ್ದು, ಸೂರ್ಯನ ಪ್ರಖರತೆಗೆ ಜನಸಾಮಾನ್ಯರು ‘ಏನ್ ಬಿಸಿಲಪ್ಪಾ’ ಎಂದು ಹೈರಾಣಾಗಿದ್ದಾರೆ.
ಶನಿವಾರದಿಂದ ರಾಜ್ಯದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ವರೆಗೂ ದಾಖಲಾಗಿದ್ದು, ಹವಾಮಾನ ಇಲಾಖೆಯು ಬಿಸಿಗಾಳಿಯ ಮುನ್ಸೂಚನೆ ನೀಡಿದೆ. ಕಲ್ಯಾಣ ಕರ್ನಾಟಕದಲ್ಲಿ ಉಷ್ಣಾಂಶವು 41ರಿಂದ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಜನ ಸಮೂಹವು ಅಸಹನೀಯ ಸೆಖೆಯಿಂದ ಬಳಲುತ್ತಿದೆ. ರಾಜ್ಯದ ವಿವಿಧೆಡೆ ಉಷ್ಣಾಂಶ ಏರಿಕೆಯಾಗಿದ್ದರೂ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೇ ತಾಪಮಾನದ ತೀವ್ರತೆ ಹೆಚ್ಚಿದೆ.
ಈ ಬೆಂಕಿಯಂಥ ಬಿಸಿಲು ಭಾನುವಾರವೂ ಮುಂದುವರಿದಿದ್ದು, ಮುಂಬರುವ ಶುಕ್ರವಾರದಿಂದ ಬಿಸಿಲಿನ ನಾಡಿನಲ್ಲಿ ತಾಪಮಾನ ಇನ್ನಷ್ಟು ಪ್ರಖರವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಳಿಗ್ಗೆ 8:30ಕ್ಕೇ ಆರಂಭವಾಗುವ ಸುಡುಬಿಸಿಲು ಸಂಜೆಯಾದರೂ ತಣ್ಣಗಾಗುತ್ತಿಲ್ಲ. ಇದರಿಂದಾಗಿ ಬೀದಿಬದಿ ವ್ಯಾಪಾರಿಗಳು ಹಾಗೂ ತರಕಾರಿ ಮಾರಾಟಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಬಿಸಿಲಿನ ತಾಪಕ್ಕೆ ಕುಳಿತ ನೆಲವೂ ಕಾದ ಕಾವಲಿಯಂತಾಗಿದ್ದು, ಜನರು ಅನಿವಾರ್ಯವಾಗಿ ನೆರಳಿನ ಆಸರೆ ಹುಡುಕಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಬೆಳಗ್ಗೆ 11ರ ನಂತರ ಹೊರಬರೋದು ಕಷ್ಟ
ಪ್ರಖರ ಬಿಸಿಲು ಕಲ್ಯಾಣ ಕರ್ನಾಟಕದ ಜನರನ್ನು ಸಂಪೂರ್ಣ ಹೈರಾಣಾಗಿಸಿದೆ. ಫೆಬ್ರವರಿ ಎರಡನೇ ವಾರದಲ್ಲಿ 35 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದ ತಾಪಮಾನವು, ಏಪ್ರಿಲ್ ಎರಡನೇ ವಾರದಲ್ಲಿ 41 ಡಿಗ್ರಿಗೆ ಜಿಗಿದಿದೆ. ಇದರಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಬೆಳಗ್ಗೆ 11 ಗಂಟೆಯ ನಂತರ ಹೊರಬರಲು ಭೀತಿ ಪಡುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸುತ್ತಲೂ ಕಲ್ಲು ಬಂಡೆಗಳು ಆವೃತವಾಗಿವೆ. ಅದರಲ್ಲೂ ಹಂಪಿ ಮತ್ತು ಹೊಸಪೇಟೆ ತಾಲೂಕುಗಳು ಬಂಡೆಗಳಿಂದ ಕೂಡಿದ ಬೆಟ್ಟಗಳನ್ನು ಹೊಂದಿರುವುದರಿಂದ ಧಗೆಯ ಪ್ರಮಾಣ ಮತ್ತಷ್ಟು ಹೆಚ್ಚು. ಸಂಜೆಯಾಗುತ್ತಿದ್ದಂತೆಯೇ ಈ ಬಂಡೆಗಳು ಶಾಖವನ್ನು ಹೊರಸೂಸುವುದರಿಂದ ಸೆಖೆ ಇನ್ನಷ್ಟು ಹೆಚ್ಚುತ್ತಿದೆ.
ಹೆಚ್ಚಾಗುತ್ತಿದೆ ರೊಟ್ಟಿಗಳ ಖರೀದಿ
ಬಿಸಿಲಿನ ಪ್ರತಾಪಕ್ಕೆ ಜನರು ಬೆವರಿನಿಂದ ತೊಯ್ದು ತೊಪ್ಪೆಯಾಗುತ್ತಿದ್ದಾರೆ. ಹಿರಿಯ ನಾಗರಿಕರು ನಿತ್ರಾಣಗೊಳ್ಳುತ್ತಿದ್ದು, ಹಣ್ಣು ಹಾಗೂ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಮನೆಗಳ ಮೇಲಿನ ಸಿಂಟೆಕ್ಸೃ್ ಟ್ಯಾಂಕ್‌ಗಳಲ್ಲಿನ ನೀರು ಕುದಿಯುತ್ತಿದ್ದು, ರಾತ್ರಿಯವರೆಗೂ ನಳಗಳಲ್ಲಿ ಬಿಸಿ ನೀರೇ ಬರುತ್ತಿದೆ. ಶಾಖದ ಕಾರಣದಿಂದ ರಾತ್ರಿ ವೇಳೆ ಅಡುಗೆ ಮಾಡುವುದು ಕಷ್ಟಕರವಾಗುತ್ತಿರುವುದರಿಂದ, ಬಹುತೇಕ ಕುಟುಂಬಗಳು ಬೆಳಗ್ಗೆಯೇ ಎರಡೂ ಹೊತ್ತಿನ ಅಡುಗೆ ಮುಗಿಸುತ್ತಿವೆ. ಜನರು ರೊಟ್ಟಿ ಕೇಂದ್ರಗಳಿಗೆ ಮುಗಿಬಿದ್ದು ರೊಟ್ಟಿ ಖರೀದಿಸುತ್ತಿದ್ದಾರೆ. ಹಾಲಿನ ಕೇಂದ್ರಗಳಲ್ಲಿ ಮಜ್ಜಿಗೆಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಮತ್ತಷ್ಟು ಹೆಚ್ಚಾಗಲಿದೆ ತಾಪಮಾನ

ಬೇಸಿಗೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಕಲಬುರಗಿ, ಬೀದರ್, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಗರಿಷ್ಠ ಉಷ್ಣಾಂಶ 41ರಿಂದ 43 ಡಿಗ್ರಿ ಸೆಲ್ಸಿಯಸ್ ಬರಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು. ಇನ್ನು ಎರಡೂವರೆ ತಿಂಗಳು ಬಿಸಿಲು ತೀವ್ರವಾಗಿರಲಿದ್ದು, ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಎಚ್ಚರ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ನಗರ ಪ್ರದೇಶಗಳಲ್ಲಿ ಸಿಗ್ನಲ್ ಕಾಯುವ ಸವಾರರು ಬಿಸಿಲಿಗೆ ನರಳುತ್ತಿದ್ದು, ಪ್ರಮುಖ ಸ್ಥಳಗಳಲ್ಲಿ ನೆರಳಿನ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಹಂಪಿ ಪ್ರವಾಸೋದ್ಯಮಕ್ಕೆ ಪೆಟ್ಟು

ಬಿಸಿಲಿನಿಂದಾಗಿ ಮನೆಗಳ ಛಾವಣಿ ಕಾಯುತ್ತಿದ್ದು, ಮಕ್ಕಳು ಮತ್ತು ವೃದ್ಧರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅನೇಕ ಮಕ್ಕಳು ನಿರ್ಜಲೀಕರಣಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇತ್ತ ಬಿಸಿಲಿನ ಎಫೆಕ್ಟ್‌ನಿಂದ ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ. ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖ ಆಗಿರುವುದರಿಂದ ಮಾರ್ಗದರ್ಶಿಗಳು ಮತ್ತು ಸಣ್ಣ ವ್ಯಾಪಾರಸ್ಥರ ಆದಾಯಕ್ಕೆ ಹೊಡೆತ ಬಿದ್ದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯದ ಜೊತೆಗೆ ಸ್ಥಳೀಯ ವ್ಯಾಪಾರ ವಹಿವಾಟಿನಲ್ಲೂ ನಷ್ಟದ ಛಾಯೆ ಆವರಿಸಿದೆ.