ಹೊಸಪೇಟೆ ಪುನೀತ್ ರಾಜಕುಮಾರ ವೃತ್ತದಲ್ಲಿ ಶುಕ್ರವಾರ ಬೈಕ್‌ ಸವಾರರ ಸುರಕ್ಷತೆಗಾಗಿ ಹೆಲ್ಮೆಟ್‌ ಜಾಗೃತಿ ಜಾಥಾಕ್ಕೆ ವಿಜಯನಗರ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಕೆ‌ಎಂ ರಾಜಶೇಖರ ಚಾಲನೆ ನೀಡಿದರು. ಸಿಜೆಎಂ ಎನ್ ಸುಬ್ರಮಣ್ಯ, ಎಸ್ಪಿ ಎಸ್.ಜಾಹ್ನವಿ, ಎಎಸ್ಪಿ ಮಂಜುನಾಥ, ಡಿವೈಎಸ್ ಪಿ ಡಾ‌.ಪಿ.ಮಂಜುನಾಥ ಇತರರಿದ್ದರು. 
ವಿಜಯನಗರ

ಜೀವ ರಕ್ಷಣೆಗೆ ಹೆಲ್ಮೇಟ್‌ ಧರಿಸಿ

ಪ್ರಮುಖ ಮುಖ್ಯಾಂಶಗಳು

  • ಹೆಲ್ಮೆಟ್ ಜಾಗೃತಿ ಅಭಿಯಾನದಲ್ಲಿ ನ್ಯಾಯಾಧೀಶ ಕೆ‌ಎಂ ರಾಜಶೇಖರ ಕರೆ
ಹೊಸಪೇಟೆ: ಶಹರಗಳಲ್ಲದೆ ಗ್ರಾಮೀಣ ಮಟ್ಟದಲ್ಲಿಯೂ ಸಹ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು ಜೀವ ರಕ್ಷಣಾ ಕವಚ ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಿರಿ ನಿಮ್ಮ ಅಮೂಲ್ಯವಾದ ಜೀವ ರಕ್ಷಣೆಗೆ ಮುಂದಾಗಿ ಎಂದು ವಿಜಯನಗರ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಕೆ‌ಎಂ ರಾಜಶೇಖರ ಹೇಳಿದರು.
ನಗರದ ಪುನೀತ್ ರಾಜಕುಮಾರ ವೃತ್ತದಲ್ಲಿ ಶುಕ್ರವಾರ ಬೈಕ್‌ ಸವಾರರ ಸುರಕ್ಷತೆಗಾಗಿ ಹೆಲ್ಮೆಟ್‌ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಕರು ಈ ದೇಶದ ಸಂಪಂತಾಗಿದ್ದು ದಿನಮನಗಳಲ್ಲಿರಸ್ತೆ ಅಪಘಾತದಲ್ಲಿಯುವಕರೆ ಮರಣ ಹೊಂದುತ್ತಿರುವದು ಆಘಾತಕಾರಿ ಸಂಗತಿಯಾಗಿದೆ. ಇಂದಿನ ಯುವಪೀಳಿಗೆ ಹೆಲ್ಮೆಟ್‌ ಇಲ್ಲದೆ ಬೈಕ್‌ ಸವಾರಿ ಮಾಡುವದು ಒಂದು ಫ್ಯಾಶನ್‌ ಎಂದುಕೊಂಡಿದ್ದಾರೆ. ಹೆಲ್ಮೆಟ್ ಇಲ್ಲದೇ ಅಪಘಾತಗಳಲ್ಲಿ ಸಾವು ನೋವು ಆಗುತ್ತಿದೆ. ಜೀವ ರಕ್ಷಣೆಗಾಗಿ ಹೆಲ್ಮೆಟ್‌ ಧರಿಸುವದನ್ನು ಮರೆಯಬೇಡಿ. ಕಾರಣ ದ್ವಿಚಕ್ರ ವಾಹನ ಸವಾರರು ಸ್ವ ಪ್ರೇರಣಿಯೊಂದಿಗೆ ಹೆಲ್ಮೇಟ್‌ ಧರಿಸಿ ತಮ್ಮ ಅಮೂಲ್ಯವಾದ ಜೀವ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ಎಸ್ಪಿ ಎಸ್.ಜಾಹ್ನವಿ ಮಾತನಾಡಿ, ವಾಹನ ಸವಾರರು ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆಮೂಲಕ ಜೀವ ರಕ್ಷಣೆ ಮಾಡಿಕೊಳ್ಳಬೇಕು. ದ್ವಿಚಕ್ರ ವಾಹನಗಳೇ ಹೆಚ್ಚು ಅಪಘಾತಕ್ಕೀಡಾಗುತ್ತವೆ. ಅಪಘಾತಗಳಲ್ಲಿ ಹೆಲ್ಮೆಟ್​ ಧರಿಸದೆ ಸಾವನ್ನಪ್ಪಿರುವರ ಸಂಖ್ಯೆ ಹೇರಳ. ಹೆಲ್ಮೆಟ್​ ಧರಿಸದಿದ್ದಾಗ ತಲೆಗೆ ತೀವ್ರ ಪೆಟ್ಟಾಗಿ ಸಾವು ಸಂಭವವಿದ್ದು, ನಿಮ್ಮ ಹಾಗೂ ಕುಟುಂಬಕ್ಕಾಗಿಯಾದರೂ ಹೆಲ್ಮೆಟ್​ ಕಡ್ಡಾಯವಾಗಿ ಧರಿಸಬೇಕು ಎಂದರು.
ಸಿಜೆಎಂ ಎನ್ ಸುಬ್ರಮಣ್ಯ, ಎಎಸ್ಪಿ ಮಂಜುನಾಥ, ಡಿವೈಎಸ್ ಪಿ ಡಾ‌.ಪಿ.ಮಂಜುನಾಥ, ಪಿಐಗಳಾದ ಹುಲಗಪ್ಪ, ಗೌಸ್, ಗುರುರಾಜ್ ಕಟ್ಟಿಮನಿ, ಫೈಜುಲ್ಲ ಎಂ‌‌.ಡಿ. ಇತರರಿದ್ದರು.