ಹೊಸಪೇಟೆಯ ಜಿಲ್ಲಾಕ್ರೀಡಾಂಗಣದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ನಿಮಿತ್ತ ನಡೆದ ರಾಷ್ಟ್ರ ಧ್ವಜಾರೋಹಣದ ಪಥಸಂಚಲನದಲ್ಲಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಗೌರವ ವಂದನೆ ಸ್ವೀಕರಿಸಿದರು. ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ ಅಲಿ ಷಾ, ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ಇತರರಿದ್ದರು.
- ಕನ್ನಡ ರಾಜ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ವೇಳೆ ಸಚಿವ ಜಮೀರ್ ಹೇಳಿಕೆ
ಹೊಸಪೇಟೆ: ನಾಡಿನಲ್ಲಿ ಆಚರಿಸುವ ಯುಗಾದಿ, ದೀಪಾವಳಿ, ಕ್ರಿಸ್ಮಸ್ ಸೇರಿದಂತೆ ಈ ಎಲ್ಲಾ ಹಬ್ಬಗಳಿಗಿಂತ ರಾಜ್ಯೋತ್ಸವ ಹಬ್ಬವೇ ವಿಶೇಷ. ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಕರ್ನಾಟಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಹೇಳಿದರು.
ಕನ್ನಡ ರಾಜ್ಯೋತ್ಸವ ನಿಮಿತ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಹಾಗೂ ಪಥಸಂಚಲನದಲ್ಲಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಹುಟ್ಟಿರುವುದು ನಮ್ಮ ಸೌಭಾಗ್ಯ. ನಾವೇಲ್ಲರೂ ಕನ್ನಡಾಂಬೆ ಸೇವೆಗೆ ಶ್ರಮಿಸಬೇಕಿದೆ. ರಾಜ್ಯದ ಎಲ್ಲ ಮದ್ರೇಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡಲಾಗಿದೆ. ಕರ್ನಾಟಕದಲ್ಲಿದ್ದು ಕನ್ನಡ ಕಲಿ ಎಂದರೆ ಜೀವನ ಸಾರ್ಥಕವಿಲ್ಲ. ಉರ್ದು ಶಾಲೆಗಳಿಲ್ಲಿ ಕನ್ನಡ ಕಡ್ಡಾಯ ಮಾಡಲಾಗಿದೆ ಎಂದರು.
ಚುನಾವಣೆ ವೇಳೆಯಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅದರಂತೆ ಐದೂ ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಿ ಅನುಷ್ಟಾನ ಮಾಡಲಾಗಿದೆ. ಆರನೇ ಗ್ಯಾರಂಟಿಯಾಗಿ ಬಡ ಜನರ, ವಸತಿ ರಹಿತರ ಕಾಳಜಿ ವಹಿಸಲಾಗಿದೆ ಎಂದರು.
ಕನ್ನಡ ರಾಜ್ಯೋತ್ಸವದ ನಿಮಿತ್ತ ಜಿಲ್ಲೆಯಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಹುಡಾ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ ಅಲಿ ಷಾ, ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಇತರರಿದ್ದರು.
ಕನ್ನಡಕ್ಕೆ 200 ವರ್ಷದ ಇತಿಹಾಸ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವ ದಿನಾಚರಣೆ ನಿಮಿತ್ತ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಕನ್ನಡಕ್ಕೆ 200 ವರ್ಷದ ಇತಿಹಾಸ ಇದೆ ಎಂದು ತಪ್ಪಾಗಿ ಹೇಳಿದರು. ಕನ್ನಡಕ್ಕೂ ಅದಕ್ಕೂ ಮೊದಲು ತಮಿಳುನಾಡು, ತೆಲುಗು, ತೆಲಂಗಾಣ, ಮಳಿಯಾಳಂ ನಂತರ ಕನ್ನಡಕ್ಕೆ 3ನೇ ಪುರತನ ಪರಂಪರೆ ಇದೆ ಎಂದರು. ಜವಾಬ್ದಾರಿಯುತ ಸಚಿವರು ವಿದ್ಯಾರ್ಥಿಗಳ ಮುಂದೆ ಭಾಷಣ ಮಾಡುವಾಗ ಎಚ್ಚರವಾಗಿರಬೇಕು. ಇಂತಹ ಹೇಳಿಕೆಯಿಂದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ವೇದಿಕೆ ಬಳಿ ಇದ್ದ ಹಲವರು ಮಾತನಾಡಿಕೊಂಡರು.