ಕಾನಹೊಸಹಳ್ಳಿ ಸಮೀಪದ ನರಸಿಂಹನಗಿರಿಯಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಪೇದೆ ಸ್ವರೂಪ್ ಕೊಟ್ಟೂರು ಮಾತನಾಡಿದರು. 
ವಿಜಯನಗರ

ಅಪರಾಧ ಕೃತ್ಯಗಳ ಎಚ್ಚರಿಕೆ ಅಗತ್ಯ

ಅಶೋಕ್ ಕುಮಾರ್ ಎನ್
ಕಾನಹೊಸಹಳ್ಳಿ: ಅಪರಾಧಗಳ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಕಾನೂನುಗಳು ಇದ್ದರೂ ಅಪರಾಧ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಅಪರಾಧಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕೆಂದು ಗುಡೇಕೋಟೆ ಠಾಣೆಯ ಪೇದೆ ಸ್ವರೂಪ್ ಕೊಟ್ಟೂರು ಹೇಳಿದರು.
ನರಸಿಂಹನಗಿರಿ ಎಸ್‌ಡಿಬಿಟಿ ಪ್ರೌಢಶಾಲೆಯಲ್ಲಿ ಗುಡೇಕೋಟೆ ಠಾಣೆಯಿಂದ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ನಿಮ್ಮ ಸುತ್ತಮುತ್ತಲಿನ ನಿತ್ಯ ಘಟನೆಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಬೇಕು. ಅಪರಾಧ ಕೃತ್ಯಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಸಕಾಲದಲ್ಲಿ ಇಲಾಖೆಗೆ ಮಾಹಿತಿ ನೀಡಬೇಕೆಂದರು.
ಯುವ ಸಮೂಹ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವುದು ದುರದೃಷ್ಟ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿದರೆ ಚಾರಿತ್ರ್ಯಕ್ಕೊಂದು ಕಪ್ಪು ಚುಕ್ಕೆಯಾಗಲಿದೆ. ಇದರಿಂದ ನಾಗರಿಕ ಸಮಾಜ ನಿಮ್ಮನ್ನು ನೋಡುವ ದೃಷ್ಟಿಯೇ ಬೇರೆ ಆಗುತ್ತದೆ.ನೀವು ಕಾನೂನುಗಳನ್ನು ಗೌರವಿಸಿದರೆ ಕಾನೂನು ನಿಮಗೆ ಸದಾ ಶ್ರೀರಕ್ಷೆ ಆಗಿರುತ್ತದೆ ಎಂದರು.
ಎಎಸ್‌ಐ ನಾಗೇಂದ್ರ ಆಚಾರಿ, ಮುಖ್ಯಶಿಕ್ಷಕ ಜಿ.ಬಸಶೆಟ್ಟಪ್ಪ, ಶಿಕ್ಷಕರಾದ ಆರ್.ಬಸವರಾಜ, ಎಂ.ಶಿವಪ್ರಸಾದ, ಡಿ.ರಾಜಕುಮಾರ್, ಜಿ.ತಿಮ್ಮಪ್ಪ ಇದ್ದರು.