- ಗರ್ಭಕಂಠದ ಕ್ಯಾನ್ಸರ್ ಮುಕ್ತ ಜಿಲ್ಲೆಯತ್ತ ಹೆಜ್ಜೆ
ಹೊಸಪೇಟೆ: ಹೆಣ್ಣು ಮಕ್ಕಳನ್ನು ಮಾರಕ ಗರ್ಭಕಂಠದ ಕ್ಯಾನ್ಸರ್ ನಿಂದ ರಕ್ಷಿಸಲು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದ್ದ ಎಚ್‌ಪಿವಿ ಲಸಿಕಾ ಅಭಿಯಾನದಲ್ಲಿ ವಿಜಯನಗರ ಜಿಲ್ಲೆಯು ಶೇ.95 ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದು ಮುಂಚೂಣಿಯಲ್ಲಿದೆ ಎಂದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯತೆ ಮತ್ತು ಸಾರ್ವಜನಿಕರ ಸಕಾರಾತ್ಮಕ ಸ್ಪಂದನೆಯಿAದಾಗಿ ಈ ಹೆಮ್ಮೆಯ ಸಾಧನೆ ಸಾಧ್ಯವಾಗಿದೆ. ಭಾರತೀಯ ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಇದನ್ನು ತಡೆಗಟ್ಟಲು ಲಸಿಕೆಯೊಂದೇ ಏಕೈಕ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಎಚ್‌ಪಿವಿ ಲಸಿಕೆಯೇನೂ ಹೊಸದಲ್ಲ. ಜಗತ್ತಿನಾದ್ಯಂತ ಈಗಾಗಲೇ ಸುಮಾರು 50 ಕೋಟಿ ಮಕ್ಕಳಿಗೆ ಈ ಲಸಿಕೆ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಇದರ ಸುರಕ್ಷತೆಯ ದತ್ತಾಂಶಗಳನ್ನು ಪರಿಶೀಲಿಸಿ, ಲಸಿಕೆ ಸಂಪೂರ್ಣ ಸುರಕ್ಷಿತ ಎಂದು ದೃಢಪಡಿಸಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ 14 ರಿಂದ 15 ವರ್ಷದೊಳಗಿನ ಒಟ್ಟು 15,124 ಹೆಣ್ಣು ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಈ ಪೈಕಿ ಈಗಾಗಲೇ 10,793 ಹೆಣ್ಣು ಮಕ್ಕಳಿಗೆ ಯಶಸ್ವಿಯಾಗಿ ಲಸಿಕೆ ವಿತರಿಸಲಾಗಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಅತ್ಯಂತ ಪರಿಣಾಮಕಾರಿಯಾದ ಗಾರ್ಡ್ ಸಿಲ್-4 ಲಸಿಕೆಯ ಒಂದು ಡೋಸ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ.
"
ಈ ಲಸಿಕೆಯು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಶೇ. 90 ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಪೋಷಕರು ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ, ತಮ್ಮ ಹೆಣ್ಣು ಮಕ್ಕಳಿಗೆ ಲಸಿಕೆ ಕೊಡಿಸುವ ಮೂಲಕ ಅವರ ಆರೋಗ್ಯಕರ ಭವಿಷ್ಯಕ್ಕೆ ನಾಂದಿ ಹಾಡಬೇಕು.
— ಕವಿತಾ ಎಸ್. ಮನ್ನಿಕೇರಿ, ಜಿಲ್ಲಾಧಿಕಾರಿ, ವಿಜಯನಗರ