ಹಗರಿಬೊಮ್ಮನಹಳ್ಳಿ ತಾಲೂಕಿನ ರಾರಾಳ್ ತಾಂಡಾದ ಬಳಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಾಗೂ ಸಿಇಒ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ ಬರ ಅಧ್ಯಯನ ನಡೆಸಿದ ವೇಳೆ ರೈತರೊಂದಿಗೆ ಚರ್ಚಿಸಿದರು. ಕೃಷಿ ಜೆಡಿ ಮಂಜುನಾಥ, ಡಿಡಿ ವಾಮದೇವು ಕೊಳ್ಳಿ, ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಕವಿತಾ ಇತರರಿದ್ದರು.
ಹೊಸಪೇಟೆ: ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಅಭಾವ ಎದುರಿಸುತ್ತಿರುವ ವಿಜಯನಗರ ಜಿಲ್ಲೆಯಲ್ಲಿ ತೀವ್ರ ಬರದ ಛಾಯೆ ಆವರಿಸಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಾದ್ಯಂತ ಸರಾಸರಿ ಶೇ. 60ರಿಂದ 64ರಷ್ಟು ತೀವ್ರ ಮಳೆ ಕೊರತೆ ದಾಖಲಾಗಿದ್ದು, ಮಳೆಯಾಶ್ರಿತ ಜಮೀನುಗಳ ನೈಜ ಪರಿಸ್ಥಿತಿ ಪರಿಶೀಲಿಸಿ ಒಂದು ವಾರದೊಳಗೆ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಂಗಳವಾರ ಬರ ಅಧ್ಯಯನ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಉದ್ಯೋಗ ಅರಸಿ ಗುಳೆ ಹೋಗುವ ಪೋಷಕರು ಮಕ್ಕಳನ್ನು ಶಾಲೆಯಿಂದ ಬಿಡಿಸಬಾರದು. ವಲಸೆ ಹೋಗುವ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದAತೆ ಸ್ಥಳೀಯ ವಸತಿ ನಿಲಯಗಳಲ್ಲಿ ಉಳಿದುಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಲಾಗುವುದು. ಮಳೆ ಅಭಾವದಿಂದ ಆರ್ಥಿಕ ನಷ್ಟ ತಗ್ಗಿಸಲು ರೈತರು ತಪ್ಪದೇ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬೇಕು. ಜಿಲ್ಲೆಯ 36 ಗ್ರಾಮಗಳಲ್ಲಿ ನೀರಿನ ಅಭಾವವಿದ್ದು, 46 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಹೂವಿನಹಡಗಲಿ, ಹರಪನಹಳ್ಳಿ ಹಾಗೂ ಕೂಡ್ಲಿಗಿ ಭಾಗಗಳಲ್ಲಿ ನೀರು ಪೂರೈಕೆಗೆ ಆದ್ಯತೆ ನೀಡಲಾಗಿದೆ. ಕೊಟ್ಟೂರು ಹಾಗೂ ಹೊಸಪೇಟೆಯಲ್ಲೂ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡವು ಹೂವಿನಹಡಗಲಿ ತಾಲೂಕಿನ ನಂದಿಬAಡಿ, ಹಂಪಾಪಟ್ಟಣ, ಮಾದೂರು, ಹಗರಿಬೊಮ್ಮನಹಳ್ಳಿ, ಇಟಗಿ, ಹರಪನಹಳ್ಳಿಯ ಮೈದೂರು, ಚಿಗಟೇರಿ, ನಿಚಾಪುರ ಹಾಗೂ ಕೊಟ್ಟೂರಿನ ಮಲ್ಲನಾಯಕನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿತು. ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಖುದ್ದು ಭೇಟಿ ನೀಡಿ ಜಮೀನುಗಳ ನೈಜ ವಸ್ತುಸ್ಥಿತಿಯನ್ನು ಪರಿಶೀಲಿಸಿತು. ಈ ವೇಳೆ ಮೆಕ್ಕೆಜೋಳ, ಜೋಳ, ತೊಗರಿ, ಈರುಳ್ಳಿ ಮತ್ತು ಕಬ್ಬು ಬೆಳೆಗಳನ್ನು ವೀಕ್ಷಿಸಿ ರೈತರ ಅಹವಾಲುಗಳನ್ನು ಆಲಿಸಲಾಯಿತು.
ಜಿಪಂ ಸಿಇಒ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ, ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಕವಿತಾ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ದೀಪಾ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್, ಉಪನಿರ್ದೇಶಕ ವಾಮದೇವ ಕೊಳ್ಳಿ, ಸಹಾಯಕ ನಿರ್ದೇಶಕ ಎಸ್.ಮನೋಹರ್ ಗೌಡ, ಹಗರಿಬೊಮ್ಮನಹಳ್ಳಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಪಿ.ಪಾಟೀಲ್, ಇತರರಿದ್ದರು
ಅಳಲು ತೋಡಿಕೊಂಡ ರೈತರು
1.76 ಎಕರೆಯಲ್ಲಿ ಬೆಳೆದಿದ್ದ 9 ತಿಂಗಳ ಕಬ್ಬಿನ ಬೆಳೆ ನೀರಿಲ್ಲದೆ ಒಣಗುತ್ತಿದೆ. ನಾಲ್ಕು ಕೊಳವೆಬಾವಿಗಳು ಬತ್ತಿ ಹೋಗಿವೆ. ಕಬ್ಬು ಬೆಳೆ ವಿಮಾ ವ್ಯಾಪ್ತಿಗೆ ಬಾರದಿರುವುದರಿಂದ ದಾರಿ ಕಾಣದಂತಾಗಿದೆ ಎಂದು ಹಂಪಾಪಟ್ಟಣದ ರೈತರೊಬ್ಬರು ಅಳಲು ತೋಡಿಕೊಂಡರು. ನಂದಿಬAಡಿಯ ರೈತರು ಎರಡು ಬಾರಿ ಬಿತ್ತನೆ ಮಾಡಿದರೂ ಮಳೆಯಿಲ್ಲದೆ ಬೀಜ ಮೊಳಕೆಯೊಡೆಯದೆ ಬಂಡವಾಳವೂ ಕೈಸೇರದ ಸ್ಥಿತಿ ತಲುಪಿದೆ ಎಂದರು. ರೈತರ ನಷ್ಟಕ್ಕೆ ಪರಿಹಾರ ದೊರಕಿಸಲು ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಗುಳೆ ತಡೆ ಉದ್ಯೋಗ
ಕೂಲಿ ಕಾರ್ಮಿಕರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು ವಿ ಬಿ ಜಿ ರಾಮ್ ಜಿ ಯೋಜನೆಯಡಿ ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲೂ ತಕ್ಷಣವೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಈಗಾಗಲೇ ವಲಸೆ ತಡೆಯಲು 318 ಕಾಮಗಾರಿಗಳು ಚಾಲ್ತಿಯಲ್ಲಿದ್ದು, ಶ್ರಮಿಕ ವರ್ಗಕ್ಕೆ ಸಂಪೂರ್ಣ ಉದ್ಯೋಗ ಒದಗಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಜಿ.ಪಂ. ಸಿಇಒ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ ಎಂದರು.
ಮಕ್ಕಳನ್ನು ವಲಸೆಗೆ ಕರೆದೊಯ್ಯಬೇಡಿ
ಪೋಷಕರು ಕೂಲಿ ಅರಸಿ ಬೇರೆಡೆಗೆ ವಲಸೆ ಹೋಗುವ ಸಂದರ್ಭದಲ್ಲಿ ಮಕ್ಕಳನ್ನು ಜೊತೆಯಲ್ಲಿ ಕರೆದೊಯ್ಯಬಾರದು. ಇದರಿಂದ ಅವರ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ, ವಲಸೆ ಹೋಗುವ ಕುಟುಂಬಗಳ ಮಕ್ಕಳನ್ನು ಸ್ಥಳೀಯ ವಸತಿ ನಿಲಯಗಳಲ್ಲಿ ಉಳಿದುಕೊಂಡು ವ್ಯಾಸಂಗ ಮುಂದುವರಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಿಇಒ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ ಸ್ಪಷ್ಟಪಡಿಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ
ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಭರದಿಂದ ಸಾಗುತ್ತಿದ್ದು, ಬಿ.ಎಲ್.ಒ. ಅಧಿಕಾರಿಗಳು ಮನೆ ಮನೆಗೆ ವಿತರಿಸಿರುವ ಎನ್ಯುಮರೇಷನ್ ಫಾರ್ಮ್ಗಳನ್ನು ನಾಗರಿಕರು ಸರಿಯಾಗಿ ಭರ್ತಿ ಮಾಡಿ ತಕ್ಷಣವೇ ಮರಳಿಸಬೇಕು. ಫಾರ್ಮ್ಗಳನ್ನು ಸಲ್ಲಿಸದಿದ್ದಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಎಚ್ಚರಿಸಿದ್ದಾರೆ.