ಹಂಪಿ ವಿದ್ಯಾರಣ್ಯ ಮಹಾಸಂಸ್ಥಾನ ಮಠದಲ್ಲಿ ಪೀಠಾಧೀಶ್ವರ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಮಂಗಳವಾರ ಚಾತುರ್ಮಾಸ ಅನುಷ್ಠಾನಕ್ಕೆ ಚಾಲನೆ ನೀಡಿ ಪೂಜೆ ಸಲ್ಲಿಸಿದರು.
ಹೊಸಪೇಟೆ: ಗುರು ಪೂರ್ಣಿಮೆಯ ಪಾವನ ಪರ್ವದಿನದಂದು ಹಂಪಿಯ ಶ್ರೀ ವಿರೂಪಾಕ್ಷೇಶ್ವರ ವಿದ್ಯಾರಣ್ಯ ಮಹಾಸಂಸ್ಥಾನ ಮಠದ ಪೀಠಾಧೀಶ್ವರರ ವೇದಘೋಷಗಳೊಂದಿಗೆ ಮಂಗಳವಾರ ಚಾತುರ್ಮಾಸ ಅನುಷ್ಠಾನಕ್ಕೆ ಚಾಲನೆ ನೀಡಿದರು.
ಹಂಪಿಯ ಶ್ರೀ ವಿರೂಪಾಕ್ಷೇಶ್ವರ ವಿದ್ಯಾರಣ್ಯ ಮಹಾಸಂಸ್ಥಾನ ಮಠದ ಪೀಠಾಧೀಶ್ವರರಾದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿಯವರು ಸೂರ್ಯೋದಯದ ವೇಳೆ ಜಪ-ತಪಗಳನ್ನು ಪೂರೈಸಿ, ಮಂಗಳವಾದ್ಯಗಳೊAದಿಗೆ ಶ್ರೀ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಆಗಮಿಸಿದರು. ಈ ವೇಳೆ ಶ್ರೀ ವಿರೂಪಾಕ್ಷೇಶ್ವರನಿಗೆ ವಿಶೇಷ ಅಭಿಷೇಕ, ರುದ್ರಪಠಣ, ಅಲಂಕಾರ ಮತ್ತು ನೈವೇದ್ಯಗಳನ್ನು ಸಲ್ಲಿಸಿದ ಅವರು, ಬಳಿಕ ತಾಯಿ ಪಂಪಾAಬಿಕೆ ಹಾಗೂ ಅಧಿದೇವತೆ ತಾಯಿ ಭುವನೇಶ್ವರಿಯ ಆಶೀರ್ವಾದ ಪಡೆದು ಚಾತುರ್ಮಾಸ ವ್ರತವನ್ನು ಸ್ವೀಕರಿಸಿದರು.
ಮತ್ತೊಂದೆಡೆ, ಮಾತಂಗ ಪರ್ವತದ ಮಾತಂಗ ಮಹಾಋಷಿ ಆಶ್ರಮದ ಪೀಠಾಧೀಶ್ವರರಾದ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿಯವರು ಮಾತಂಗ ಪರ್ವತದ ಗುಹಾಂತರ ದೇವಾಲಯದಲ್ಲಿರುವ ಶ್ರೀ ಮಾತಂಗೇಶ್ವರ ಹಾಗೂ ತಾಯಿ ಮಾತಂಗಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಶಾಸ್ತ್ರೋಕ್ತ ವೇದಘೋಷಗಳ ನಡುವೆ ಚಾತುರ್ಮಾಸದ ಅನುಷ್ಠಾನ ಆರಂಭಿಸಿದ ಶ್ರೀಗಳಿಗೆ, ಭಕ್ತಾದಿಗಳು ಕಾಷಾಯ ವಸ್ತ್ರ, ಫಲ-ಪುಷ್ಪಗಳನ್ನು ಸಮರ್ಪಿಸಿ ಗೌರವಿಸಲಾಯಿತು. ಈ ಪವಿತ್ರ ಧಾರ್ಮಿಕ ಕಾರ್ಯಕ್ರಮಕ್ಕೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು.