ಮ.ಬ.ಸೋಮಣ್ಣ 
ವಿಜಯನಗರ

ಹಿರಿಯ ರಂಗಕರ್ಮಿ ಮ.ಬ. ಸೋಮಣ್ಣ ನಿಧನ

ಹೊಸಪೇಟೆ: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ರಂಗಭೂಮಿ ಕಲಾವಿದ ಹಾಗೂ ನಿವೃತ್ತ ಶಿಕ್ಷಕ ಮ.ಬ. ಸೋಮಣ್ಣ (74) ಅವರು ಶುಕ್ರವಾರ ರಾತ್ರಿ ಇಲ್ಲಿನ ಬಸವೇಶ್ವರ ಬಡಾವಣೆಯ ತಮ್ಮ ನಿವಾಸದಲ್ಲಿ ನಿಧನರಾದರು. ಮೃತರು ಒಬ್ಬ ಪುತ್ರನನ್ನು ಅಗಲಿದ್ದು, ಶನಿವಾರ ಮಧ್ಯಾಹ್ನ 3 ಗಂಟೆಗೆ ನಗರದ ಮುಕ್ತಿಧಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿತು.
​1952 ಜು.೦1ರಂದು ತಾಲೂಕಿನ ಜಿ.ನಾಗಲಾಪುರದಲ್ಲಿ ಜನಿಸಿದ ಸೋಮಣ್ಣನವರು, ಶಿಕ್ಷಣ ಕ್ಷೇತ್ರದಲ್ಲಿ 42 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದರು. 7ನೇ ವಯಸ್ಸಿನಲ್ಲೇ ಅಭಿನಯ ಆರಂಭಿಸಿದ್ದ ಇವರ ಪ್ರತಿಭೆಯನ್ನು ಕಂಡು ರಾಷ್ಟ್ರಕವಿ ಡಾ. ಶಿವರಾಮ ಕಾರಂತರು ಇವರನ್ನು ಮಹಾಬಲ ಸೋಮಣ್ಣ ಎಂದು ಪ್ರೀತಿಯಿಂದ ಕರೆದಿದ್ದರು.
​ಸಾಹಿತ್ಯ, ಸಂಗೀತ, ನಟನೆ, ನಿರ್ದೇಶನ, ಸಂಘಟನೆ, ತಬಲಾ ವಾದನ, ನಿರೂಪಣೆ ಹಾಗೂ ವೇಷಭೂಷಣ ವಿನ್ಯಾಸದಲ್ಲಿ ನಿಪುಣರಾಗಿದ್ದ ಸೋಮಣ್ಣ, ವೀರಕೇಸರಿ, ಧ್ರುವಸಂಗಮ, ಶಿವನೊಲುಮೆಯ ಶಿಶು, ಅವ್ವಣ್ಣೆವ್ವ ಹಾಗೂ ವಿಶ್ವಬಂಧು ಬಸವಣ್ಣ ಸೇರಿದಂತೆ ನೂರಕ್ಕೂ ಹೆಚ್ಚು ನಾಟಕಗಳನ್ನು ರಚಿಸಿ, ನಿರ್ದೇಶಿಸಿ ಅಭಿನಯಿಸಿದ್ದರು. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಇವರ ಸಾವಿರಕ್ಕೂ ಹೆಚ್ಚು ರಂಗಗೀತೆಗಳು ಪ್ರಸಾರಗೊಂಡಿವೆ. ಹಲವು ಸಣ್ಣಕಥೆಗಳನ್ನು ಬರೆದಿದ್ದ ಇವರು, ಅನೇಕ ರಂಗ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.
​ಕಮಲಾಪುರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಇವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಶಿಕ್ಷಕ, ರಂಗ ಭಾರ್ಗವ ಹಾಗೂ ಟಿ.ಪಿ. ಕೈಲಾಸಂ ಪ್ರಶಸ್ತಿ ಸೇರಿದಂತೆ 1800ಕ್ಕೂ ಹೆಚ್ಚು ಪುರಸ್ಕಾರಗಳು ಲಭಿಸಿವೆ. ಡಾ.ಎಚ್.ನರಸಿಂಹಯ್ಯ, ಕೆ.ವಿ.ಸುಬ್ಬಣ್ಣ, ಎಂ.ಪಿ.ಪ್ರಕಾಶ್ ಮುಂತಾದ ದಿಗ್ಗಜರ ಒಡನಾಟ ಹೊಂದಿದ್ದ ಸೋಮಣ್ಣನವರ ಅಗಲಿಕೆಗೆ ನಾಡಿನ ಸಾಹಿತ್ಯ ಮತ್ತು ರಂಗಭೂಮಿ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.