ವಿಬಿ ಜಿ ರಾಮ್ ಜಿ ಯೋಜನೆ ವಿರೋಧಿಸಿ ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದಿಂದ ಹಂಪಸಾಗರವರೆಗೆ ಕಾಂಗ್ರೆಸ್‌ನಿಂದ ಪಾದಯಾತ್ರೆ ನಡೆಸಲಾಯಿತು.  
ವಿಜಯನಗರ

ಗುಳೆ ಹೋಗಲು ದಾರಿಯಾಗಲಿದೆ ವಿಬಿ ಜಿ ರಾಮ್ ಜಿ

ಹಗರಿಬೊಮ್ಮನಹಳ್ಳಿ: ವಿಬಿ ಜಿ ರಾಮ್ ಜಿ ಯೋಜನೆ ಜಾರಿ ವಿರೋಧಿಸಿ ಬನ್ನಿಕಲ್ಲು ಗ್ರಾಮದಿಂದ ಹಂಪಸಾಗರ ನಾಡಕಚೇರಿವರೆಗೆ ಕಾಂಗ್ರೆಸ್‌ನಿಂದ ಸೋಮವಾರ ಪಾದಯಾತ್ರೆ ನಡೆಯಿತು.
ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ಪ್ರಧಾನಿ ಮನಮೋಹನ ಸಿಂಗ್ ಆಡಳಿತ ಅವಧಿಯಲ್ಲಿ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜನಪರವಾಗಿತ್ತು. ಇದನ್ನು ಈಗ ವಿಬಿ ಜಿ ರಾಮ್ ಜಿ ಎಂಬ ಹೆಸರಿನಲ್ಲಿ ಬದಲಾಯಿಸಿ ರಾಜ್ಯ ಸರ್ಕಾರದಿಂದ ಶೇ.40 ಅನುದಾನ ಭರಿಸುವಂತೆ ಹೇಳಿರುವುದು ಸರಿಯಲ್ಲ ಎಂದರು.
ಯೋಜನೆಯನ್ನು ಬದಲಾಯಿಸುವ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆದಂತಾಗಲಿದೆ. ಗುಳೆ ಹೋಗಲು ದಾರಿಯಾಗಲಿದೆ. ಮಹಿಳೆಯರು, ಎಸ್ಸಿ, ಎಸ್ಟಿ ಸಮುದಾಯದವರಿಗೆ ನೂತನ ಯೋಜನೆ ಕಂಟಕವಾಗಲಿದೆ. ಹಳೆಯ ಯೋಜನೆ ಮರು ಜಾರಿಯಾಗಬೇಕೆಂದು ಹೂವಿನಹಡಗಲಿ ಕ್ಷೇತ್ರ ವ್ಯಾಪ್ತಿಯ ಆರು ಜಿಪಂಗಳಲ್ಲಿ ಹಂತ ಹಂತವಾಗಿ ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಪಿ.ವಿಜಯಕುಮಾರ್, ಗ್ರಾರಂಟಿ ಯೋಜನೆಗಳ ಸಮಿತಿ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಶಾಂತನಗೌಡ, ಒಬಿಸಿ ಘಟಕದ ಬ್ಲಾಕ್ ಉಪಾಧ್ಯಕ್ಷ ಹನುಮಜ್ಜ, ಜಿಲ್ಲಾ ಅಧ್ಯಕ್ಷ ಟಿ.ಮಹೇಶ, ಪ್ರಮುಖರಾದ ಚಂದ್ರನಾಯ್ಕ, ಕಾಲ್ವಿ ಹನುಮಂತಪ್ಪ, ಜಿ.ವಸಂತ, ಸಕ್ರಳ್ಳಿ ಮಲ್ಲಿಕಾರ್ಜುನಗೌಡ, ದೊಡ್ಡಬಸಪ್ಪ, ಕೆ.ಬಸಮ್ಮ, ಪ್ರೇಮಕ್ಕ, ನಸ್ರೀನ್, ಲಲಿತಮ್ಮ ಮತ್ತಿತರರು ಇದ್ದರು.