ಹೊಸಪೇಟೆ ಅಮರಾವತಿಯಲ್ಲಿ ಶ್ರೀ ವೆಂಕಟೇಶ್ವರ ಮೂರ್ತಿಗೆ ಅಲಂಕಾರ ಮಾಡಿರುವುದು.
- ದೇಗುಲಗಳಲ್ಲಿ ಸರದಿ ಸಾಲಿನಲ್ಲಿ ದರ್ಶನ
- ಅಮರಾವತಿ ಲಕ್ಷ್ಮಿ ವೆಂಕಟೇಶ್ವರದಲ್ಲಿ ಭಕ್ತರ ದಂಡು
ಹೊಸಪೇಟೆ: ವೈಕುಂಠ ಏಕಾದಶಿ ಅಂಗವಾಗಿ ಮಂಗಳವಾರ ನಗರದ ಸೇರಿ ಜಿಲ್ಲಾಧ್ಯಾಂತ ವೆಂಕಟೇಶ್ವರ ದೇಗುಲ ಸೇರಿದಂತೆ ನಾನಾ ಕಡೆ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಸರದಿ ಸಾಲಿನಲ್ಲಿ ದರ್ಶನ ಪಡೆದ ಭಕ್ತರ ದಂಡು ಕಂಡು ಬಂತು.
ಬೆಳಿಗ್ಗೆ ಹೊತ್ತು ಹರಿಯುವ ಮುನ್ನವೇ ದೇಗುಲಗಳೆದುರು ಭಕ್ತರು ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ಹೊತ್ತೇರುತ್ತಿದ್ದಂತೆ ಭಕ್ತರ ಸಂಖ್ಯೆ ಏರುತ್ತಲೇ ಇತ್ತು. ಅದರಲ್ಲೂ ಅಮರಾವತಿ ಲಕ್ಷ್ಮಿ ವೆಂಕಟೇಶ್ವರ ದೇಗುಲದಲ್ಲಿ ದಿನವಿಡೀ ಜನಜಾತ್ರೆ ಇತ್ತು. ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದು ದೇವರ ದರ್ಶನ ಪಡೆದರು.
ಬೆಳಿಗ್ಗೆ 4 ಗಂಟೆಗೆ ಲಕ್ಷ್ಮಿ ವೆಂಕಟೇಶ್ವರ ದೇವರಿಗೆ ಅಭಿಷೇಕ ಮಾಡಿ, ಹೂಗಳಿಂದ ಅಲಂಕಾರಗೊಳಿಸಿ ಪೂಜೆ ನೆರವೇರಿಸಲಾಯಿತು. ಅನಂತರ ಉತ್ಸವ ಮೂರ್ತಿಗಳಿಗೂ ಪೂಜೆ ಸಲ್ಲಿಸಲಾಯಿತು. ವೈಕುಂಠ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ನಗರದ ವೇಣುಗೋಪಾಲ ದೇಗುಲ, ವಡಕರಾಯ ದೇಗುಲ, ವೀರಭದ್ರೇಶ್ವರ ದೇಗುಲ, ಸಾಯಿಬಾಬಾ ದೇಗುಲ ಸೇರಿದಂತೆ ಇತರೆ ದೇಗುಲಗಳಿಗೂ ಭೇಟಿ ನೀಡಿ ದರ್ಶನ ಪಡೆದರು.