ಹೂವಿನಹಡಗಲಿ: ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಲು 10 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಪಟ್ಟಣದ ತಹಸೀಲ್ದಾರ್ ಕಚೇರಿಯ ಗ್ರಾಮಾಡಳಿತಾಧಿಕಾರಿ ಶಹನಾಜ್ ಬೇಗಂ ಅವರು ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕೊಟ್ಟೂರು ನಿವಾಸಿ ಸಿದ್ದಲಿಂಗಸ್ವಾಮಿ ಎಂಬುವವರ ತಾಯಿಯವರ ಜಮೀನು ತಾಲೂಕಿನ ಹೊಳಗುಂದಿ ಗ್ರಾಮದ ವ್ಯಾಪ್ತಿಗೆ ಒಳಪಡುತ್ತದೆ. ಜಮೀನಿನ ಪಹಣಿಯಲ್ಲಿ ತಂದೆ ಎಂದು ನಮೂದಾಗಿದ್ದ ಜಾಗದಲ್ಲಿ ಗಂಡ ಎಂದು ತಿದ್ದುಪಡಿ ಮಾಡಲು ಸಿದ್ದಲಿಂಗಸ್ವಾಮಿ ಅವರು 2025ರ ಏಪ್ರಿಲ್ 02ರಂದು ಅರ್ಜಿ ಸಲ್ಲಿಸಿದ್ದರು. ಈ ತಿದ್ದುಪಡಿ ಕಾರ್ಯ ಪೂರ್ಣಗೊಳಿಸಲು ಶಹನಾಜ್ ಬೇಗಂ ಅವರು 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ಸಿದ್ದಲಿಂಗಸ್ವಾಮಿ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಪೂರ್ವಯೋಜಿತವಾಗಿ ಬಳ್ಳಾರಿ ಲೋಕಾಯುಕ್ತ ಎಸ್ಪಿ ಎನ್.ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸಚಿನ್ ಎಸ್.ಚಲವಾದಿ, ಸಿಪಿಐಗಳಾದ ರಾಜೇಶ್ ಲಮಾಣಿ, ಅಮರೇಶ್ ಹುಬ್ಬಳ್ಳಿ ದಾಳಿ ನಡೆಸಿ, ತಹಸೀಲ್ ಕಚೇರಿಯಲ್ಲಿ ಸಿದ್ದಲಿಂಗಸ್ವಾಮಿ ಅವರಿಂದ 10 ಸಾವಿರ ರೂ. ಹಣವನ್ನು ಪಡೆದು, ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಳ್ಳುತ್ತಿದ್ದಂತೆಯೇ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಶಹನಾಜ್ ಬೇಗಂ ಅವರನ್ನು ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ. ಲಂಚದ ಹಣವನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.