ಚಿಂತ್ರಪಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಕೆಲಸದಲ್ಲಿ ತೊಡಗಿರುವ ವಿದ್ಯಾರ್ಥಿಗಳು. 
ವಿಜಯನಗರ

ಕೆರೆ ಅಭಿವೃದ್ಧಿ ಕೆಲಸಕ್ಕೆ ಮಕ್ಕಳ ಬಳಕೆ

ಕುರುವತ್ತಿ ಶ್ರೀಕಾಂತಪ್ಪ

ಹಗರಿಬೊಮ್ಮನಹಳ್ಳಿ:

13ನೇ ವಾರ್ಡ್ ವ್ಯಾಪ್ತಿಯ ಚಿಂತ್ರಪಳ್ಳಿಯಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಲಾ ಮಕ್ಕಳನ್ನು ಬಳಸಿಕೊಂಡಿರುವ ಪ್ರಸಂಗ ಮಂಗಳವಾರ ನಡೆದಿದೆ.

ಚಿಂತ್ರಪಳ್ಳಿ ಪಕ್ಕದ ಕೆರೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೋಟಿ ರೂ.ಗೂ ಅಧಿಕ ಮೊತ್ತದ ಕಾಮಗಾರಿಯ ಕಟ್ಟಡ (ಪಿಚ್ಚಿಂಗ್) ನಿರ್ಮಾಣಕ್ಕೆ ಕೂಡ್ಲಿಗಿಯ ಅನುದಾನಿತ ಹಿರೇಮಠ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು, ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲೆಯ 9ನೇ ತರಗತಿಯ ಒಬ್ಬ ವಿದ್ಯಾರ್ಥಿ ಬೆಳಗಿನಿಂದಲೇ ಕಾರ್ಮಿಕರ ರೀತಿ ಕೆಲಸ ಮಾಡಿದ್ದಾರೆ.

16ವರ್ಷದೊಳಗಿನ ಮಕ್ಕಳನ್ನು ಕಟ್ಟಡ ಇತರ ಕಾಮಾಗಾರಿ ಕೆಲಸಕ್ಕೆ ಬಳಸಿಕೊಳ್ಳಬಾರದೆನ್ನುವ ನಿಯಮ ಇದ್ದರೂ ಇಲ್ಲಿ ಪಾಲನೆಯಾಗಿಲ್ಲ. ಇದರಲ್ಲಿ ಸಣ್ಣ ನೀರಾವತಿ ಇಲಾಖೆ ಅಧಿಕಾರಿಗಳು ಮತ್ತು ಕಾಮಗಾರಿ ನಿರ್ವಹಣೆ ಜವಾಬ್ದಾರಿ ಹೊತ್ತ ಗುತ್ತಿಗೆದಾರ ಮತ್ತು ಪಾಲಕರ ನಿರ್ಲಕ್ಷ್ಯ ಎದ್ದುಕಾಣುತ್ತಿದೆ.

"

ಸೋಮವಾರ ಕಾಮಗಾರಿ ವೀಕ್ಷಣೆಗೆ ಹೋದಾಗ ಅಂತಹ ಯಾವುದೇ ಮಕ್ಕಳು ಕಂಡು ಬಂದಿರಲಿಲ್ಲ. ಮಂಗಳವಾರ ಭೇಟಿ ನೀಡಿಲ್ಲ. ಇಂತಹ ಕಟ್ಟಡ ಕಾಮಗಾರಿಗೆ ಮಕ್ಕಳನ್ನು ಬಳಸಿಕೊಳ್ಳುವಂತಿಲ್ಲ. ಸಂಬಂಧಪಟ್ಟ ಅಧಿಕಾರಿಯನ್ನು ಸ್ಥಳಕ್ಕೆ ಕಳಿಸಿ ವಿವರ ಪಡೆದುಕೊಳ್ಳುವೆ.

— ಮುರಳೀಧರ ಸಣ್ಣ ನೀರಾವರಿ ಇಲಾಖೆ ಎಇಇ ಹೂವಿನ ಹಡಗಲಿ ವಿಭಾಗ

"

ಮಕ್ಕಳು ಕಾರ್ಮಿಕ ಕೆಲಸ ಮಾಡುತ್ತಿರುವುದು ತಿಳಿದಿಲ್ಲ. ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಮಕ್ಕಳನ್ನು ಕಾಮಗಾರಿ ಕೆಲಸಕ್ಕೆ ಬಳಸಿಕೊಳ್ಳಬಾರದೆಂಬ ಸಾಮಾನ್ಯ ತಿಳಿವಳಿಕೆ ಗುತ್ತಿಗೆದಾರ ಅಥವಾ ಆ ಇಲಾಖೆ ನಿರ್ವಹಣೆ ಅಧಿಕಾರಿಗೆ ಇರಬೇಕಿತ್ತು.

— ಜಗದೀಶ ಕ್ಷೇತ್ರ ಶಿಕ್ಷಣಾಧಿಕಾರಿ, ಹಗರಿಬೊಮ್ಮನಹಳ್ಳಿ