ಹೊಸಪೇಟೆ ಫ್ರೀಡಂ ಪಾರ್ಕ್ ಯೋಗವನದಲ್ಲಿ ಭಾನುವಾರ ಆಚಾರ್ಯ ಬಾಲಕೃಷ್ಣ ಅವರ ಜನ್ಮದಿನದ ಅಂಗವಾಗಿ ಗಿಡಮೂಲಿಕೆ ದಿನಾಚರಣೆ (ಜಡಿಬೂಟಿ ದಿವಸ್) ಮುನಿರಾಬಾದ್ ತೋಟಗಾರಿಕಾ ತರಬೇತಿ ಕೇಂದ್ರದ ಹಿರಿಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉದ್ಘಾಟಿಸಿದರು. ಕನ್ನಡ ವಿವಿ ಯೋಗಾಧ್ಯಯನ ಕೇಂದ್ರದ ಉಪನ್ಯಾಸಕ ಕೃಷ್ಣ ನಾಯ್ಕ, ಪತಂಜಲಿ ಕಿಸಾನ್ ಸೇವಾ ಸಮಿತಿಯ ಜಿಲ್ಲಾ ಪ್ರಭಾರಿ ವಿಠೋಬ ಬಲ್ಲೂರ್ ಇತರರಿದ್ದರು. 
ವಿಜಯನಗರ

ವೈದ್ಯರ ಸಲಹೆ ಪಡೆದು ಗಿಡಮೂಲಿಕೆ ಬಳಸಿ

ಪ್ರಮುಖ ಮುಖ್ಯಾಂಶಗಳು

  • ಯೋಗಾ ಉಪನ್ಯಾಸಕ ಕೃಷ್ಣ ನಾಯ್ಕ ಸಲಹೆ
ಹೊಸಪೇಟೆ: ನಮ್ಮ ಮನೆ ಸುತ್ತಮುತ್ತ ಹಾಗೂ ಹಿತ್ತಿಲಿನಲ್ಲಿ ಬೆಳೆಯುವ ಗಿಡಮೂಲಿಕೆಗಳು ಅಪಾರ ಔಷಧೀಯ ಗುಣಗಳನ್ನು ಹೊಂದಿವೆ. ಆದರೆ ವೈದ್ಯರ ಸಲಹೆ ಪಡೆದು ಅವುಗಳನ್ನು ಆರೋಗ್ಯ ಸುಧಾರಣೆಗೆ ಬಳಸಿಕೊಳ್ಳಬೇಕು ಎಂದು ಕನ್ನಡ ವಿವಿ ಯೋಗಾಧ್ಯಯನ ಕೇಂದ್ರದ ಉಪನ್ಯಾಸಕ ಕೃಷ್ಣ ನಾಯ್ಕ ಹೇಳಿದರು.
ಪತಂಜಲಿ ಯೋಗ ಸಮಿತಿ, ಜಿಲ್ಲಾ ಕಿಸಾನ್ ಸೇವಾ ಸಮಿತಿ, ಭಾರತ ಸ್ವಾಭಿಮಾನ್ ಟ್ರಸ್ಟ್, ಯುವ ಭಾರತ್ ಹಾಗೂ ಮಹಿಳಾ ಪತಂಜಲಿ ಯೋಗ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಫ್ರೀಡಂ ಪಾರ್ಕ್ ಯೋಗವನದಲ್ಲಿ ಭಾನುವಾರ ಆಚಾರ್ಯ ಬಾಲಕೃಷ್ಣ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಗಿಡಮೂಲಿಕೆ ದಿನಾಚರಣೆ (ಜಡಿಬೂಟಿ ದಿವಸ್) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಮೃತಬಳ್ಳಿ, ಕರಿಬೇವು, ನಿರ್ಗುಂಡಿ, ಎಕ್ಕೆ, ಅತಿಬಲ–ಮಹಾಬಲ, ಚದುರಂಗ, ಬ್ರಾಹ್ಮಿ, ಶಂಖಪುಷ್ಪ, ಮುಟ್ಟಿದರೆ ಮುನಿ, ಬಜೆ, ತೊಂಡೆ ಸೊಪ್ಪು, ಗರಿಕೆ, ಭೃಂಗರಾಜ, ಲೆಮನ್ ಗ್ರಾಸ್, ಪತ್ತರ್‌ಛಟ್, ಉತ್ತರಾಣಿ, ಅಲೋವೆರಾ, ದೊಡ್ಡಪತ್ರೆ, ಇನ್ಸುಲಿನ್ ಸೇರಿದಂತೆ ವಿವಿಧ ಗಿಡಮೂಲಿಕೆ ಹಾಗೂ ಬಳ್ಳಿಗಳ ಮಹತ್ವವನ್ನು ಅವರು ವಿವರಿಸಿದರು. ಆಯುರ್ವೇದ ತಜ್ಞರ ಸಲಹೆ ಇಲ್ಲದೆ ಯಾವುದೇ ಗಿಡಮೂಲಿಕೆಯನ್ನು ನೇರವಾಗಿ ಬಳಸಬಾರದು. ಕೆಲವು ಗಿಡಗಳಲ್ಲಿ ವಿಷಕಾರಕ ಅಂಶಗಳೂ ಇರುತ್ತವೆ. ಅಂತಹ ಅಂಶಗಳನ್ನು ಸಂಸ್ಕರಿಸಿ ಬಳಸುವ ವಿಧಾನ ತಜ್ಞರಿಗೆ ಮಾತ್ರ ತಿಳಿದಿರುತ್ತದೆ ಎಂದು ಎಚ್ಚರಿಸಿದರು.
ಕಳೆದ 10 ವರ್ಷಗಳಿಂದ ಕಿಸಾನ್ ಸೇವಾ ಸಮಿತಿಯ ಜಿಲ್ಲಾ ಪ್ರಭಾರಿಯಾಗಿ ಸೇವೆ ಸಲ್ಲಿಸಿದ್ದು, ಇದೀಗ ಜವಾಬ್ದಾರಿಯನ್ನು ಹಸ್ತಾಂತರಿಸಿ ಸ್ವತಃ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದಿನ ಪೀಳಿಗೆಗೆ ಫಲವತ್ತಾದ ಮಣ್ಣು ಹಾಗೂ ಆರೋಗ್ಯಪೂರ್ಣ ಗಿಡಮೂಲಿಕೆಗಳನ್ನು ತಲುಪಿಸಬೇಕಾದರೆ ರಾಸಾಯನಿಕ ಮುಕ್ತ ಸಾವಯವ ಕೃಷಿಗೆ ಒತ್ತು ನೀಡುವುದು ಅತ್ಯಗತ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುನಿರಾಬಾದ್ ತೋಟಗಾರಿಕಾ ತರಬೇತಿ ಕೇಂದ್ರದ ಹಿರಿಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪ್ರಕೃತಿಯಲ್ಲಿ 20 ಸಾವಿರಕ್ಕೂ ಅಧಿಕ ಗಿಡಮೂಲಿಕೆಗಳ ಮಾಹಿತಿಯಿದ್ದರೂ ನಾವು ಬಳಸುತ್ತಿರುವುದು ಕೇವಲ 7 ಸಾವಿರದಷ್ಟು ಮಾತ್ರ. ಪ್ರತಿಯೊಬ್ಬರೂ ಇವುಗಳ ಮಹತ್ವ ತಿಳಿದು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪತಂಜಲಿ ಕಿಸಾನ್ ಸೇವಾ ಸಮಿತಿಯ ಜಿಲ್ಲಾ ಪ್ರಭಾರಿ ವಿಠೋಬ ಬಲ್ಲೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಇ.ಸತ್ಯಪ್ಪ, ಮಹಿಳಾ ಪ್ರಭಾರಿ ಕವಿತಾ ಆನಂದ್, ರಾಜ್ಯ ಸಮಿತಿ ಸದಸ್ಯ ಬಾಲಚಂದ್ರ ಶರ್ಮಾ, ಭಾರತ ಸ್ವಾಭಿಮಾನ ಟ್ರಸ್ಟ್ನ ಜಿಲ್ಲಾ ಪ್ರಭಾರಿ ರಾಜೇಶ್ ಕಾರ್ವಾ, ಯುವ ಭಾರತ್ ಪ್ರಭಾರಿ ಶ್ರೀಧರ, ಮಾಧ್ಯಮ ಪ್ರಭಾರಿ ಅನಂತ ಜೋಶಿ, ಸೋಶಿಯಲ್ ಮೀಡಿಯಾ ಪ್ರಭಾರಿ ಅಕ್ಷಯ ಆಚಾರ್, ಯೋಗ ವಿಸ್ತಾರಕ ಪ್ರಭಾರಿ ಶ್ರೀನಿವಾಸ ಮಂಚಿಕಟ್ಟಿ, ಸಂವಾದ ಪ್ರಭಾರಿ ಇ.ರಾಮು, ಫ್ರೀಡಂ ಪಾರ್ಕ್ ಯೋಗ ಕೇಂದ್ರದ ಸಂಚಾಲಕ ಶ್ರೀರಾಮ, ಪ್ರಮುಖರಾದ ಪ್ರಹ್ಲಾದ್ ಭೂಪಾಳ್, ಪ್ರಮೀಳಾ, ದಾಕ್ಷಾಯಿಣಿ ಶಿವಕುಮಾರ್, ಮಾರುತಿ ಪೂಜಾರ್, ಅನುಪಮಾ, ಶೈಲಜಾ ಕಳಕಪ್ಪ, ವೀರಣ್ಣ ಇತರರಿದ್ದರು.