ಹೊಸಪೇಟೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಸಂಚಾಲಕ ಬದ್ದಿ ಮರಿಸ್ವಾಮಿ, ಪ್ರಮುಖರಾದ ಜಗನ್ನಾಥ, ಎಚ್.ನಾಗಪ್ಪ, ವೀರೇಶ, ಉದಯಕುಮಾರ್, ಮರಿದಾಸ, ಎಚ್.ಲಕ್ಷ್ಮಣ, ಸಂತೋಷ್, ದುರುಗೇಶ ಇತರರಿದ್ದರು. 
ವಿಜಯನಗರ

ಶುದ್ಧೀಕರಣ' ಹೆಸರಲ್ಲಿ ಅಸ್ಪೃಶ್ಯತೆ ಆಚರಣೆ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಮಲ್ಲಿಕಾರ್ಜುನ ಖರ್ಗೆ ಭಾಷಣದ ಸ್ಥಳ ಶುದ್ಧೀಕರಣ ಖಂಡಿಸಿ ದಸಂಸ ಪ್ರತಿಭಟನೆ
ಹೊಸಪೇಟೆ: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿ ಹೋಮ-ಹವನ ನಡೆಸಿರುವ ಜಾತಿವಾದಿ ಮನಸ್ಥಿತಿಯ ಕೃತ್ಯವನ್ನು ಖಂಡಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಆ.08ರಂದು ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದರು. ಆದರೆ, ಅವರ ಭಾಷಣದ ಎರಡು ದಿನಗಳ ಬಳಿಕ ಸ್ಥಳೀಯ ಕೆಲ ಸಂಘಟನೆಗಳ ಕಾರ್ಯಕರ್ತರು ಆ ಮೈದಾನವನ್ನು ಶುಚಿಗೊಳಿಸಿ, ಹೋಮ-ಹವನ ಮಾಡುವ ಮೂಲಕ ಅಸ್ಪೃಶ್ಯತೆ ಆಚರಿಸಿದ್ದಾರೆ ಎಂದು ಸಮಿತಿ ಆರೋಪಿಸಿದೆ. ಸಂವಿಧಾನ ಜಾರಿಗೆ ಬಂದು ದಶಕಗಳೇ ಕಳೆದರೂ ಇಂತಹ ಹೀನಾಯ ಅಸ್ಪೃಶ್ಯತೆ ಆಚರಣೆ ಜೀವಂತವಾಗಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಮಹಾದ್ರೋಹವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಕೃತ್ಯದ ಹಿಂದಿರುವ ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಅಸ್ಪೃಶ್ಯತೆ ಆಚರಣೆ ವಿರೋಧಿ ಕಾಯ್ದೆಯಡಿ ದೇಶದ್ರೋಹ ಪ್ರಕರಣ ದಾಖಲಿಸಿ, ಕೂಡಲೇ ಬಂಧಿಸಬೇಕು. ತಪ್ಪಿತಸ್ಥರ ವಿರುದ್ಧ ಸರ್ಕಾರ ಶೀಘ್ರ ಕಠಿಣ ಕ್ರಮ ಕೈಗೊಳ್ಳದಿದ್ದರೆ ರಾಷ್ಟ್ರವ್ಯಾಪಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.