ಹಂಪಿ ಕಲ್ಲಿನ ರಥ 
ವಿಜಯನಗರ

ಹಂಪಿ ಉತ್ಸವ ಕಾಣದ ಉತ್ಸಾಹ

ಪ್ರಮುಖ ಮುಖ್ಯಾಂಶಗಳು

  • ಅನುದಾನದ ಕೊರತೆಯಿಂದ ಕಂಟಕ ?
  • ಮುಂದುವರಿದ ಉದಾಸೀನ
  • ರಾಜ್ಯ ಸರ್ಕಾರ ತಾತ್ಸಾರ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಕಳೆದ ಎರಡು ವರ್ಷಗಳಿಂದ ಹಂಪಿ ಉತ್ಸವವನ್ನು ಮುಂದೂಡುತ್ತಲೇ ಬಂದಿರುವ ರಾಜ್ಯ ಸರ್ಕಾರ, ಈ ಬಾರಿ ಉತ್ಸವದ ಬಗ್ಗೆ ತಾತ್ಸಾರ ಮುಂದುವರಿದಿದೆ.
ವಿಶ್ವಪರಂಪರೆ ತಾಣದಲ್ಲಿ ದಶಕಗಳಿಂದ ಮೂರು ಹಂಪಿ ನಡೆಯುತ್ತಿರುವ ಉತ್ಸವಕ್ಕೆ ಈ ವರ್ಷ ಅನುದಾನದ ಕೊರತೆ ಎದುರಾಗಿದೆ. ಹಿಂದೆ ರೈತರು ಸಂಕಷ್ಟದಲ್ಲಿದ್ದಾಗ, ಆತ್ಮಹತ್ಯೆ ಸರಣಿ ನಡೆದಾಗ ಅಥವಾ ಬರಗಾಲ, ಅತಿವೃಷ್ಟಿಯಂತಹ ಕಾರಣಗಳಿಗಾಗಿ ಉತ್ಸವವನ್ನು ಮುಂದೂಡಲಾಗುತ್ತಿತ್ತು. ಆದರೆ, ಪ್ರಸ್ತುತ ಸಿಎಂ ಕುರ್ಚಿ ಕದನದಲ್ಲಿರುವ ಸರ್ಕಾರಕ್ಕೆ ಉತ್ಸವ ಆಚರಿಸುವ ಬಗ್ಗೆ ಗಮನವಿಲ್ಲದಂತಾಗಿದೆ. ಈ ವರ್ಷ ಉತ್ಸವ ನಡೆಯುವುದೇ ಎಂಬ ಅನುಮಾನ ಬಲವಾಗಿ ಕಾಡುತ್ತಿದೆ.
ನಾಡಹಬ್ಬ ಮೈಸೂರು ದಸರಾವನ್ನು ಸರ್ಕಾರ ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ದಸರಾ ಜಂಬು ಸವಾರಿಗೆ ಪ್ರೇರಣೆಯಾಗಿರುವ ಸಾಂಸ್ಕೃತಿಕ ಹಿನ್ನೆಲೆ ಹಾಗೂ ಜನೋತ್ಸವ ಎನಿಸಿರುವ ಹಂಪಿ ಉತ್ಸವಕ್ಕೆ ಮಾತ್ರವೇಕೆ ಈ ನಿರ್ಲಕ್ಷ್ಯ ಎಂಬ ಪ್ರಶ್ನೆ ಉದ್ಭವಿಸಿದೆ. ಸಾಮಾನ್ಯವಾಗಿ ರಾಜ್ಯ ಸರ್ಕಾರ ಮಂಡಿಸುವ ಬಜೆಟ್‌ನಲ್ಲಿಯೇ ಹಂಪಿ ಉತ್ಸವಕ್ಕಾಗಿ ಅನುದಾನ ಘೋಷಣೆ ಆಗುತ್ತಿತ್ತು. ಆದರೆ, ಈ ಬಾರಿ ಕನ್ನಡ-ಸಂಸ್ಕೃತಿ ಇಲಾಖೆಗೆ ಹಂಚಿಕೆಯಾಗಿರುವ ಅನುದಾನದಲ್ಲಿ ಹಣವಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಪ್ರಸಿದ್ದ ಉತ್ಸವವನ್ನು ಆಚರಿಸಿ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಈ ಬಾರಿ ನಡೆಯುತ್ತದೋ ಇಲ್ಲವೋ ಎಂಬ ಆತಂಕ ಶುರುವಾಗಿದೆ.

ಗಮನ ಹರಿಸುವರೇ ಉಸ್ತುವಾರಿ ಸಚಿವ ?

ಹಂಪಿ ಉತ್ಸವಕ್ಕೆ ಸರ್ಕಾರ ಅನುದಾನ ಘೋಷಿಸಿದ ಬಳಿಕ ಜಿಲ್ಲಾಡಳಿತದಿಂದ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತಿತ್ತು. ಸರ್ಕಾರ ಬಿಡುಗಡೆ ಮಾಡಿದ ಅನುದಾನದ ಜತೆಗೆ ಜಿಪಂ, ತಾಪಂ ಹಾಗೂ ಸ್ಥಳೀಯ ಸಂಸ್ಥೆಗಳಿಂದಲೂ ಸಹಾಯ ಪಡೆಯ ಲಾಗುತ್ತಿತ್ತು. ಅನುದಾನ ಕಡಿಮೆಯಾದರೆ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಮೇಲೆ ಒತ್ತಡ ಹಾಕಿ ಹೆಚ್ಚಿನ ಹಣ ಮಂಜೂರು ಮಾಡಿಸುತ್ತಿದ್ದರು. ಪ್ರಸ್ತುತ ಜಮೀರ್ ಅಹ್ಮದ್ ಖಾನ್ ಅವರಿಗೆ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹೊರ ಜಿಲ್ಲೆಯವರೇ ಉಸ್ತುವಾರಿ ಸಚಿವ ಆಗಿರುವುದರಿಂದ ಅವರು ಉತ್ಸವದತ್ತ ಗಮನ ಹರಿಸುತ್ತಾರೆಯೇ ಎಂಬುದು ಕಾದು ನೋಡಬೇಕು.

ಬಿಸಿಲು, ಪರೀಕ್ಷೆಗಳು ಅಡ್ಡಿ

ಹಂಪಿ ಉತ್ಸವದ ರೂವಾರಿಯಾಗಿದ್ದ ಮಾಜಿ ಡಿಸಿಎಂ ಎಂ.ಪಿ. ಪ್ರಕಾಶ ಅವರು ಈ ಭಾಗದಲ್ಲಿ ಉತ್ತಮ ವಾತಾವರಣವಿರುವ ನವೆಂಬರ್‌ನಲ್ಲಿ ಉತ್ಸವ ನಡೆಸುತ್ತಿದ್ದರು. ನಂತರ ಬಂದ ಬಿಜೆಪಿ ಸರ್ಕಾರ ಬಹುತೇಕ ಜನವರಿಯಲ್ಲಿ ಆಚರಣೆ ಮಾಡಿತು. ಕಳೆದ ಎರಡು ಬಾರಿ ಕಾಂಗ್ರೆಸ್ ಸರ್ಕಾರ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ಆಚರಣೆ ಮಾಡಿದೆ. ಜನವರಿ ನಂತರ ಬಿಸಿಲ ತಾಪ ಹೆಚ್ಚಿರುವುದರಿಂದ ಉತ್ಸವದ ಸಿದ್ಧತೆ ನಡೆಸುವ ಕಾರ್ಮಿಕ ವರ್ಗ ಹಾಗೂ ಅಧಿಕಾರಿಗಳು ಹೈರಾಣಾಗಲಿದ್ದಾರೆ. ಇದೇ ಸಮಯದಲ್ಲಿ ಪಿಯುಸಿ-ಎಸ್‌ಎಸ್ಎಲ್‌ಸಿ ಪರೀಕ್ಷೆಗಳು ಇರುವುದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಮಸ್ಯೆ ಎದುರಾಗಲಿದೆ. ಅಲ್ಲದೆ ಬಿಸಿಲ ಕಾರಣದಿಂದ ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಬರುವುದೂ ಅನುಮಾನ.
"

ನಾವು ಹಾಗೂ ಎಸ್ಪಿ ಹೊಸಬರು ಆಗಿರುವುದ ರಿಂದ, ಸರ್ಕಾರ ಘೋಷಣೆ ಮಾಡುವ ಮುನ್ನ ಹಂಪಿ ಉತ್ಸವ ಆಚರಣೆಯ ಕುರಿತ ಸಾಧಕ-ಬಾಧಕಗಳ ಚರ್ಚಿಸಲು ಕಚೇರಿಯಲ್ಲಿ ಒಂದು ಸುತ್ತಿನ ಅಧಿಕಾರಿಗಳ ಸಭೆ ನಡೆಸಲಾಗಿದೆ.

"

ಪ್ರತಿ ವರ್ಷದಂತೆ ಈ ವರ್ಷವೂ ಹಂಪಿ ಉತ್ಸವವನ್ನು ನಡೆಸಲಾಗುವುದು. ಕಳೆದ ವರ್ಷ ಯಶಸ್ವಿಯಾಗಿ ಹಂಪಿ ಉತ್ಸವ ಆಯೋಜಿಸಲಾಗಿತ್ತು. ಜನಸಾಗರವೇ ಹಂಪಿಯತ್ತ ಮುಖ ಮಾಡಿತ್ತು. ಈ ಬಾರಿಯೂ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಸಿಎಂ ಅನುಮತಿ ಪಡೆಯಲಾಗುತ್ತದೆ.