ಕಮಲಾಪುರದಲ್ಲಿ ಲಾರಿಯಲ್ಲಿ ಕಬ್ಬು ತುಂಬುತ್ತಿರುವ ಕಾರ್ಮಿಕರು  
ವಿಜಯನಗರ

ಬಗೆಹರಿಯದ ಕಬ್ಬಿನ ಬೆಲೆ ಸಮರ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಕಬ್ಬು ಖರೀದಿಗೆ ಚೌಕಾಸಿ
  • ಅಸಮಾಧಾನದಲ್ಲಿ ಕಬ್ಬು ಬೆಳೆಗಾರ
  • ಮುಂದುವರಿದ ಹೋರಾಟ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ತಾಲೂಕು ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಕಬ್ಬಿನ ಬೆಲೆ ನಿಗದಿಯಾಗದೆ ಕಟಾವು ಕಾರ್ಯ ಈಗಾಗಲೇ ಆರಂಭವಾಗಿದೆ. ಆದರೆ, ಖರೀದಿಗೆ ನಾನಾ ಕಡೆಯ ಸಕ್ಕರೆ ಕಾರ್ಖಾನೆಯವರು ಕಬ್ಬು ಖರೀದಿಗೆ ಚೌಕಾಸಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ನಷ್ಟದಲ್ಲಿ ಕೈತೊಳೆಯುತ್ತಿರುವ ಕಬ್ಬು ಬೆಳೆಗಾರರಿಗೆ ಶೀಘ್ರ ಹೆಚ್ಚಿನ ಬೆಲೆ ನಿಗದಿ ಮಾಡುವಂತೆ ಒತ್ತಡ ಹೆಚ್ಚಾಗಿದೆ.
ಈ ಭಾಗದಲ್ಲಿ ಅಂದಾಜು 10 ಸಾವಿರ ಹೆಕ್ಟೇರ್ ಗೂ ಹೆಚ್ಚಿನ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಪ್ರಸಕ್ತ ಸಾಲಿನ ಕಬ್ಬು ಹಂಗಾಮು ಆರಂಭವಾಗಿದೆ. ಸಿರಗುಪ್ಪ, ಮೈಲಾರ ಶುಗರ್ಸ್, ದುಗ್ಗಾವತಿ, ಮುಂಡರಗಿ ಸೇರಿದಂತೆ ಇತರೆಡೆ ಸಕ್ಕರೆ ಕಾರ್ಖಾನೆಗಳು ಇಲ್ಲಿನ ಕಬ್ಬು ಖರೀದಿಸುತ್ತಿವೆ. ಪ್ರತಿ ವರ್ಷ ಕಬ್ಬು ಕಟಾವು ಮಾಡುವ ಮುಂಚೆ ಬೆಲೆನಿಗದಿ ಮಾಡಿ ಕಾರ್ಖಾನೆಗಳಿಗೆ ಕಬ್ಬು ಕೊಡಲಾಗುತ್ತಿತ್ತು. ಆದರೆ, ಕಬ್ಬಿನ ಅವಧಿ ಮುಗಿಯುತ್ತಿರುವುದರಿಂದ ಬೆಲೆ ನಿಗದಿ ಆಗದಿದ್ದರೂ ಅನಿವಾರ್ಯವಾಗಿ ಕಾರ್ಖಾನೆಗಳಿಗೆ ರೈತರು ಕಬ್ಬು ಸಾಗಿಸುತ್ತಿದ್ದಾರೆ.
ಸಿರುಗುಪ್ಪ ಕಾರ್ಖಾನೆ 3,100 ರೂ., ಮೈಲಾರ ಶುಗರ್ಸ್ 3,170 ರೂ., ದುಗ್ಗಾವತಿ ಕಾರ್ಖಾನೆ ಹಾಗೂ ಮುಂಡರಗಿ ಕಾರ್ಖಾನೆಗಳು ತಲಾ 3,270 ರೂ. ಹೇಳುತ್ತಿವೆ. ಆದರೆ, ಎಲ್ಲ ಕಬ್ಬು ಬೆಳೆಗಾರರ ವರ್ಗ ಪ್ರತಿ ಟನ್ ಕಬ್ಬಿಗೆ ಕನಿಷ್ಠ 3,500 ರೂ. ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದೆ. ಬೆಲೆ ನಿಗದಿಯಾಗದಿದ್ದರೂ ಕೆಲ ರೈತರು ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸುತ್ತಿದ್ದಾರೆ. ಇನ್ನೂ ಕೆಲವರು 3,500 ರೂ. ನಿಗದಿಯಾಗುವವರೆಗೆ ಕಬ್ಬು ಕಟಾವು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಬೆಲೆ ನಿಗದಿ ಮಾಡಬೇಕು ಎಂಬುದು ಬೆಳೆಗಾರರ ಒತ್ತಾಯ.
ರಾಜ್ಯ ಸರ್ಕಾರವು ಇತ್ತೀಚೆಗೆ ಪ್ರತಿ ಟನ್ ಕಬ್ಬಿಗೆ ಪರಿಷ್ಕೃತ ದರವನ್ನು ನಿಗದಿಪಡಿಸಿ ಅಧಿಕೃತ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2025-26ನೇ ಸಾಲಿನ ಕಬ್ಬು ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ 3,300 ರೂ. ದರವನ್ನು ನಿಗದಿಪಡಿಸಲಾಗಿದೆ. ಈ ಮೊತ್ತದಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಗೆ 3,250 ರೂ. ಪಾವತಿಸಬೇಕು ಮತ್ತು ಉಳಿದ 50 ರೂ. ಗಳನ್ನು ರಾಜ್ಯ ಸರ್ಕಾರವು ಒಂದು ಬಾರಿಗೆ ನೀಡುವ ಆರ್ಥಿಕ ನೆರವು (ಸಹಾಯಧನ) ಆಗಿ ರೈತರಿಗೆ ಎರಡನೇ ಕಂತಿನಲ್ಲಿ ಪಾವತಿಸಲು ನಿರ್ಧಾರ ಮಾಡಲಾಗಿದೆ. ಈ ದರವು ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿದ್ದಾಗಿದೆ. ಈ ಆದೇಶದ ಹೊರತಾಗಿಯೂ ವಿಜಯನಗರ ಸೇರಿದಂತೆ ಎಲ್ಲ ಜಿಲ್ಲೆಗಳ ಕಬ್ಬು ಬೆಳೆಗಾರರು ಪ್ರತಿ ಟನ್‌ಗೆ ಕನಿಷ್ಠ 3,500 ರೂ. ನಿಗದಿಪಡಿಸುವಂತೆ ಒತ್ತಾಯಿಸಿ ಹೋರಾಟ ಮುಂದುವರಿಸಿದ್ದಾರೆ.

ರಾಜಕೀಯ ಜಟಾಪಟಿ

ಕಬ್ಬು ಬೆಲೆ ನಿಗದಿ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ರಾಜಕೀಯ ಜಟಾಪಟಿ ಆರಂಭಗೊಂಡಿದೆ. ಕೇಂದ್ರ ಸಚಿವ ಪಲ್ಲಾದ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು, ರೈತರ ಸಮಸ್ಯೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ್ದಾರೆ. ಜೊತೆಗೆ, ಕೇಂದ್ರದ ಎಫ್ ಆರ್‌ಪಿ ದರ ಒಂದು ಕನಿಷ್ಠ ಮಾನದಂಡವಾಗಿದ್ದು, ರಾಜ್ಯ ಸರ್ಕಾರವು ಹಿಂದುಳಿದ ರೈತರ ಹಿತ ರಕ್ಷಣೆಗಾಗಿ ಹೆಚ್ಚಿನ ರಾಜ್ಯ ಸಲಹಾ ಬೆಲೆ ಘೋಷಿಸಲು ಮುಕ್ತವಾಗಿದೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಈವರೆಗೂ ಘೋಷಿಸಿಯೇ ಇಲ್ಲ ಎಂದು ಟೀಕಿಸಿದ್ದಾರೆ. ಕೇಂದ್ರ ಸರ್ಕಾರವು ಶೇ. 10.25 ಇಳುವರಿ ಇರುವ ಟನ್ ಕಬ್ಬಿಗೆ ಸಾಗಣೆ ಮತ್ತು ಕಟಾವು ವೆಚ್ಚ ಸೇರಿ 3,550 ರೂ. ನ್ಯಾಯಸಮ್ಮತ ಮತ್ತು ಲಾಭದಾಯಕ ದರ (ಎಫ್‌ಆರ್‌ಪಿ) ಯನ್ನು ನಿಗದಿಪಡಿಸಿದೆ.

ನಿರ್ವಹಣೆ ವೆಚ್ಚ ಮತ್ತು ಪರಿಷ್ಕೃತ ದರ

ಪ್ರತಿ ಎಕರೆ ಜಮೀನಿನಲ್ಲಿ ಕಬ್ಬಿನ ಬೀಜ, ಗೊಬ್ಬರ ಸೇರಿ ನಿರ್ವಹಣೆಗೆ ಒಂದು ವರ್ಷದವರೆಗೆ ಅಂದಾಜು 50,000 . 0 60,000 ರೂ. ಖರ್ಚಾಗುತ್ತದೆ. ಒಂದು ಎಕರೆ ಜಮೀನಿನಲ್ಲಿ ಅಂದಾಜು 30 ರಿಂದ 50 ಟನ್‌ ಕಬ್ಬು ಬೆಳೆಯಬಹುದು. ಎಕರೆಗೆ 90,000 ರೂ. ನಿಂದ 1.20 ಲಕ್ಷ ರೂ. ವರೆಗೆ ಆದಾಯ ಬರುತ್ತದೆ. ಇದರಲ್ಲಿ ಕಟಾವು (650 ರೂ. ನಿಂದ 700 ರೂ. ವರೆಗೆ), ಹೊರ ತೆಗೆಯಲು, ಲೋಡ್ ಮಾಡಲು, ಲಾರಿ ಚಾಲಕರಿಗೆ ಹಾಗೂ ಊಟ-ಉಪಹಾರ ಸೇರಿದಂತೆ ಸಾವಿರಾರು ರೂ.ಗಳನ್ನು ರೈತರು ಭರಿಸಬೇಕು. ಇದರಿಂದ ರೈತನಿಗೆ ಒಂದು ಟನ್‌ಗೆ ಉಳಿಯುವುದು ಕೇವಲ 1,000 ರೂ. ನಿಂದ 1,500 ರೂ. ವರೆಗೆ ಮಾತ್ರ. ರೈತರು ಕಡಿಮೆ ಬೆಲೆಗೆ ಕಬ್ಬು ನೀಡಿದರೆ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.
"

ಕಬ್ಬಿನ ಬೆಲೆಯನ್ನು ಈಗಾಗಲೇ ನಿಗದಿ ಮಾಡಲಾಗಿದೆ. ನಿಗದಿಯಂತೆ ಕಾರ್ಖಾನೆಗಳು ಖರೀದಿ ಮಾಡಬೇಕು. ಸಮಸ್ಯೆ ಇದ್ದಲ್ಲಿ ಗಮನಕ್ಕೆ ತರಬೇಕು. ರೈತರಿಗೆ ನಷ್ಟ ಆಗುವ ರೀತಿಯಲ್ಲಿ ವರ್ತಿಸಿದರೆ ಕ್ರಮಕೈಗೊಳ್ಳಲಾಗುತ್ತದೆ.

"

ರೈತರು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಬ್ಬು ಬೆಳೆದು ಸಾಗಿಸುವಷ್ಟರಲ್ಲಿ ಈಗಿನ ಬೆಲೆಗೆ ನಷ್ಟವಾಗುತ್ತಿದೆ. ದೂರದ ಕಾರ್ಖಾನೆಗಳಿಗೆ ಸಾಗಿಸಲು ಸಾಗಣೆ ವೆಚ್ಚ ಹೆಚ್ಚಾಗುತ್ತಿದೆ. ಆದ್ದರಿಂದ ಸರ್ಕಾರ ಮಧ್ಯಪ್ರವೇಶಿಸಿ ಕಬ್ಬಿನ ಬೆಲೆ 3,500 ರೂ.ಗೆ ನಿಗದಿ ಮಾಡಬೇಕು. ಇಲ್ಲವೆಂದರೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ.