ಕಲ್ಲಿನ ರಥ 
ವಿಜಯನಗರ

ಹಂಪಿಗೆ ಯುನೆಸ್ಕೋ ತಂಡ ಭೇಟಿ ಸಾಧ್ಯತೆ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಏಪ್ರೀಲ್‌ನಲ್ಲಿ ಐತಿಹಾಸಿಕ ಸ್ಮಾರಕಗಳ ಸ್ಥಿತಿಗತಿ ಪರಿಶೀಲನೆ
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ಸಂರಕ್ಷಣಾ ಸ್ಥಿತಿಗತಿ ಪರಿಶೀಲಿಸಲು ಯುನೆಸ್ಕೋ ಉನ್ನತ ಮಟ್ಟದ ನಿಯೋಗ ರಿಯಾಕ್ಟಿವ್ ಮಾನಿಟರಿಂಗ್ ಕಮಿಟಿ ಏಪ್ರಿಲ್ ಎರಡನೇ ವಾರದಲ್ಲಿ ಭೇಟಿ ನೀಡಲಿದೆ.
ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ತಾಣಗಳ ನೈಜ ಸ್ಥಿತಿಗತಿ ಮತ್ತು ಅವುಗಳ ಮೇಲೆ ಎದುರಾಗಬಹುದಾದ ಅಪಾಯಗಳನ್ನು ಪತ್ತೆಹಚ್ಚಲು ಯುನೆಸ್ಕೋ ರಿಯಾಕ್ಟಿವ್ ಮಾನಿಟರಿಂಗ್ ಕಮಿಟಿ ಪ್ರಮುಖ ಅಸ್ತ್ರವಾಗಿದೆ. ಜಾಗತಿಕವಾಗಿ ಗುರುತಿಸಲ್ಪಟ್ಟ ಐತಿಹಾಸಿಕ ಮತ್ತು ನೈಸರ್ಗಿಕ ತಾಣಗಳ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಈ ಸಮಿತಿಯು ಕಾರ್ಯಪ್ರವೃತ್ತವಾಗುತ್ತದೆ. 2009 ರಲ್ಲಿ ಹಂಪಿಯಲ್ಲಿ ಬಳಿಯ ವಿರೂಪಾಪುರಗಡ್ಡೆ ಸಮೀಪದ ಸೇತುವೆ ಕುಸಿತದ ಹಿನ್ನೆಲೆಯಲ್ಲಿ ಯುನೆಸ್ಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಅದಾದ ಬಳಿಕ ಬರೋಬ್ಬರಿ 17 ವರ್ಷಗಳ ಸುದೀರ್ಘ ಅಂತರದ ನಂತರ ಇದೇ ಮೊದಲ ಬಾರಿಗೆ ಅಧಿಕೃತ ನಿಯೋಗವು ಹಂಪಿAiÀ ಸಂರಕ್ಷಿತ ಪ್ರದೇಶಗಳನ್ನು ಸೂಕ್ಷ್ಮವಾಗಿ ಅದ್ಯಾಯನ ಮಾಡಲಿದೆ. ಈ ಮಹತ್ವದ ಭೇಟಿಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾ.02ರಂದು ಉನ್ನತ ಮಟ್ಟದ ಪೂರ್ವಸಿದ್ಧತಾ ಸಭೆ ನಡೆದಿದ್ದು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಯುನೆಸ್ಕೋ ತಂಡಕ್ಕೆ ಅಗತ್ಯವಿರುವ ದಾಖಲೆಗಳು ಮತ್ತು ಮಾಹಿತಿಯನ್ನು ಒದಗಿಸಲು ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ.
ಹಂಪಿ ಸ್ಮಾರಕಗಳ ಸುತ್ತಮುತ್ತ ನಡೆಯುತ್ತಿರುವ ಅನಧಿಕೃತ ನಿರ್ಮಾಣಗಳು ಮತ್ತು ಹೆಚ್ಚುತ್ತಿರುವ ನಗರೀಕರಣವು ಸ್ಮಾರಕಗಳ ಮೂಲ ಸ್ವರೂಪಕ್ಕೆ ಧಕ್ಕೆ ತರುತ್ತಿದೆಯೇ ಎಂಬುದನ್ನು ತಂಡವು ಪರಿಶೀಲಿಸಲಿದೆ. ತುಂಗಭದ್ರಾ ನದಿ ತೀರದಲ್ಲಿ ಅಥವಾ ಸ್ಮಾರಕಗಳ ಬಫರ್ ಝೋನ್‌ನಲ್ಲಿ ಕೈಗೊಳ್ಳಲಾಗುತ್ತಿರುವ ಹೊಸ ರಸ್ತೆ, ಪ್ರವಾಸೋದ್ಯಮ ಮೂಲಸೌಕರ್ಯ ಯೋಜನೆಗಳು ಪಾರಂಪರಿಕ ನಿಯಮಗಳನ್ನು ಮೀರುತ್ತಿವೆಯೇ ಎಂದು ತಂಡವು ಮೌಲ್ಯಮಾಪನ ಮಾಡಲಿದೆ. ಇದೇ ವೇಳೆ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮತ್ತು ಭಾರತೀಯ ಪುರಾತತ್ವ ಇಲಾಖೆ ಕೈಗೊಂಡಿರುವ ಸಂರಕ್ಷಣಾ ಕ್ರಮಗಳ ಬಗ್ಗೆ ತಜ್ಞರು ಮಾಹಿತಿ ಪಡೆಯಲಿದ್ದಾರೆ. ನೇರವಾಗಿ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ ವಿಶ್ವ ಪಾರಂಪರಿಕ ಸಮಿತಿಗೆ ವರದಿ ಸಲ್ಲಿಸುತ್ತದೆ. ಒಂದು ವೇಳೆ ತಾಣವು ತೀವ್ರವಾಗಿ ಹದಗೆಟ್ಟಿದ್ದರೆ, ಅದನ್ನು ಅಪಾಯದಲ್ಲಿರುವ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡುವ ಅಧಿಕಾರ ಈ ತಂಡಕ್ಕಿದೆ.