ಕಂಪ್ಲಿಯ ಡಿಎಟಿಸಿಯಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರಕ್ಕೆ ಜಂಟಿ ಕೃಷಿ ನಿರ್ದೇಶಕ ಎಸ್. ಸೋಮಸುಂದರ್ ಚಾಲನೆ ನೀಡಿದರು. ಪ್ರಮುಖರಾದ ಜಯಣ್ಣ, ಎಸ್.ಎನ್.ಮಂಜುನಾಥ, ಎಂ.ದಯಾನಂದ, ಶಶಿಕಾಂತ್ ಕೋತಿಮನಿ ಇತರರಿದ್ದರು.
ಜಿಲ್ಲೆಯಲ್ಲಿ ಮುಸುಕಿನ ಜೋಳ, ಭತ್ತ ಬೆಳೆಯ ಉಪ ಉತ್ಪನ್ನಗಳಿಂದ ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ)ಗಳು ಇ-ಮಾರುಕಟ್ಟೆ ಮೂಲಕ ಪ್ರಗತಿ ಸಾಧಿಸಲು ಅವಕಾಶಗಳಿದ್ದು ಈ ಕುರಿತು ಜಾಗೃತಿವಹಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಎಸ್.ಸೋಮಸುಂದರ್ ಹೇಳಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರ(ಡಿಎಟಿಸಿ)ದಲ್ಲಿ ಬೆಂಗಳೂರಿನ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಣ ಕೇಂದ್ರ ಹಾಗೂ ಡಿಎಟಿಸಿ ಸಹಯೋಗದಲ್ಲಿ ಜಿಲ್ಲೆಯ ವಿವಿಧ ಇಲಾಖೆ/ಸಂಸ್ಥೆಗಳ ಎಫ್‌ಪಿಒ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು.
ಜಿಲ್ಲೆಯಲ್ಲಿ 30ಎಣ್ಣೆ ಗಾಣ, ಚಿಲ್ಲಿ, ಬೇಕರಿ ಇತರ ಉಪ ಉತ್ಪನ್ನಗಳಿಗಾಗಿ ಎಫ್‌ಪಿಒಗಳು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಲು ಮುಂದೆ ಬಂದಿವೆ. ಕಿರು ಆಹಾರ ಉದ್ದಿಮೆ(ಪಿಎಂಎಫ್‌ಎಂಇ), ಕೃಷಿ ಮೂಲ ಸೌಕರ್ಯ ನಿಧಿ(ಎಐಎಫ್) ಈ ಯೋಜನೆಗಳಡಿ ನಾನಾ ಸೌಲಭ್ಯಗಳಿದ್ದು ಪಡೆದುಕೊಳ್ಳುವಲ್ಲಿ ಎಫ್‌ಪಿಒಗಳು ಮುಂದೆ ಬರಬೇಕು ಎಂದರು.
ಬೆಂಗಳೂರಿನ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ಹಿರಿಯ ಸಲಹೆಗಾರ ಜಯಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ, ಬೆಳೆಯನ್ನು ಮೌಲ್ಯವರ್ಧನೆಗೊಳಿಸಿ ಸಂಸ್ಕರಣೆ, ಪ್ಯಾಕಿಂಗ್, ಬ್ರ್ಯಾಂಡಿಂಗ್, ಮಾರುಕಟ್ಟೆ ಕೌಶಲಗಳಿಂದ ಆನ್‌ಲೈನ್ ಮಾರ್ಕೆಟಿಂಗ್ ಮೂಲಕ ಎಫ್‌ಪಿಗಳು ಪ್ರಗತಿ ಸಾಧಿಸಬೇಕಿದೆ. ಇದರಿಂದ ರೈತ ಮತ್ತು ರೈತ ಉತ್ಪಾದಕ ಸಂಸ್ಥೆಗಳು ಪ್ರಗತಿಗೊಳ್ಳಲು ಸಾಧ್ಯ ಎಂದರು.
ಕೃಷಿ ಉಪನಿರ್ದೇಶಕ ಎಸ್.ಎನ್.ಮಂಜುನಾಥ, ಡಿಎಟಿಸಿ ಸಹಾಯಕ ನಿರ್ದೇಶಕ ಎಂ.ದಯಾನಂದ, ತೋಟಗಾರಿಕೆ ಜಂಟಿ ನಿರ್ದೇಶಕ ಶಶಿಕಾಂತ್ ಕೋತಿಮನಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಜೆ.ಶಂಕರ್, ಶಿರುಗುಪ್ಪದ ಮಹೇಶ್, ಕಂಪ್ಲಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಎಸ್.ಚೇತನ್‌ಕುಮಾರ್ ನಾಯಕ್, ಅಧಿಕಾರಿಗಳಾದ ಶರಣಪ್ಪ, ಶಕೀಲ್, ನವ್ಯಾ ಪ್ರಶಾಂತ್ ಇತರರಿದ್ದರು.