ಹರಪನಹಳ್ಳಿ ಬಳಿಯ ಹೊಲವೊಂದರಲ್ಲಿ ಟ್ಯಾಕ್ಟರ್ ಮೂಲಕ ಜಮೀನು ಹದಗೊಳಿಸುತ್ತೀರುವುದು
- ಡೀಸೆಲ್ ದರ ಏರಿಕೆ
- ಹೊಲ ರಂಟೆ ಹೊಡೆಯಲು ಕೃಷಿಕರ ಪರದಾಟ
- ಭೂಮಿ ಹದಗೊಳಿಸಲು ರೈತರ ಸಿದ್ಧತೆ
ಹೊಸಪೇಟೆ: ಜಿಲ್ಲೆಯಲ್ಲಿ ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ರೈತರು ಹದಗೊಳಿಸಲು ಸಿದ್ದತೆ ನಡೆಸಿದ್ದಾರೆ. ಆದರೆ, ಡೀಸೆಲ್ ದರ ಏರಿಕೆಯಿಂದ ರಂಟೆ, ಕುಂಟೆ ಹೊಡೆಯಲು ಅಗತ್ಯವಿರುವ ಟ್ರ‍್ಯಾಕ್ಟರ್ ಗಳ ಬಾಡಿಗೆ ಮಾತ್ರ ದುಬಾರಿಯಾಗಿದ್ದು, ಹೈರಾಣಾಗುವಂತಾಗಿದೆ.
ರೈತರು ಸದ್ಯ ಪೂರ್ವ ಮುಂಗಾರು ಇರುವುದರಿಂದ ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ರೈತರು ಜಮೀನುಗಳಲ್ಲಿ ರಂಟೆ (ನೇಗಿಲು) ಹೊಡೆಯುವುದು, ಕುಂಟೆ ಹೊಡೆಯುವುದು, ಕಸ ಕೀಳುವುದು, ತ್ಯಾಜ್ಯ ಆರಿಸುವುದು, ಸಾವಯವ (ಸಗಣಿ) ಕೊಟ್ಟಿಗೆ ಗೊಬ್ಬರ ಹರಡುವುದು ಸೇರಿದಂತೆ ಇನ್ನಿತರ ಕೃಷಿ ಕಾರ್ಯಗಳನ್ನು ಭರದಿಂದ ನಡೆಸಿದ್ದಾರೆ. ಎತ್ತುಗಳನ್ನು ಹೊಂದಿದ ರೈತರು ಭೂಮಿ ಹದಗೊಳಿಸಲು ಮುಂದಾಗುತ್ತಿದ್ದಾರೆ. ಎತ್ತುಗಳಿಲ್ಲದ ರೈತರು ಟ್ರ‍್ಯಾಕ್ಟರ್ ಯಂತ್ರೋಪಕರಣಗಳ ಮೊರೆ ಹೋಗಿದ್ದಾರೆ. ಆದರೆ ಇಂಧನ ದರ ಏರಿಕೆ ಹಾಗೂ ಕೆಲ ಕಡೆ ಡೀಸೆಲ್ ಅಭಾವದಿಂದ ಟ್ರ‍್ಯಾಕ್ಟರ್‌ಗಳ ಬಾಡಿಗೆ ಬಲು ದುಬಾರಿಯಾಗಿದೆ.
ಈ ಹಿಂದೆ ಒಂದು ಗಂಟೆ ಟಿಲ್ಲರ್ 1100 ರೂ. ರಿಂದ 1300 ರೂ., ರೂಟರ್ 1200 ರೂ. ರಿಂದ 1400 ರೂ., ಪಟ್ಲರ್ 1500 ರೂ. ರಿಂದ 1600 ರೂ. ವರೆಗೆ ಬಾಡಿಗೆಯಿತ್ತು. ಆದರೆ, ತೈಲ ಬೆಲೆ ಏರಿಕೆಯಿಂದ ಟಿಲ್ಲರ್‌ಗೆ 1200 ರಿಂದ 1300 ರೂ., ರೂಟರ್ 1900 ರಿಂದ 2000 ರೂ., ಪಟ್ಲರ್ 2200 ರಿಂದ 2500 ರೂ. ವರೆಗೆ ಟ್ರ‍್ಯಾಕ್ಟರ್ ಬಾಡಿಗೆ ಏರಿಕೆಯಾಗಿದೆ. ಪ್ರತಿ ಎಕರೆಗೆ ರೈತರು ದುಪ್ಪಟ್ಟು ಹಣ ನೀಡಬೇಕಾಗಿದ್ದು, ಬೆಲೆ ಏರಿಕೆಗೆ ಅನ್ನದಾತರು ಹಿಡಿ ಶಾಪ ಹಾಕುವಂತಾಗಿದೆ.
ಹದಭರಿತ ಮಳೆ ಬೇಕು
ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಆಗಾಗ್ಗೆ ಮಳೆ ಸುರಿಯುತ್ತಿದೆಯಾದರೂ ಇನ್ನೂ ಹಲವು ಕಡೆಗಳಲ್ಲಿ ಸರಿಯಾಗಿ ಮಳೆಯಾಗುತ್ತಿಲ್ಲ. ಕೆಲವೆಡೆ ಒಳ್ಳೆಯ ಹದಭರಿತ ಮಳೆಯಾಗಿದ್ದು, ಬಿತ್ತನೆಗೆ ಅಣಿಯಾಗುತ್ತಿದ್ದಾರೆ. ಬೇಸಿಗೆಯಲ್ಲಿ ರಂಟೆ ಹೊಡೆಸಿರುವ ಕೆಲ ರೈತರು ಇನ್ನೂ ಹೆಚ್ಚಿನ ಹದಭುತ ಮಳೆಗಾಗಿ ಕಾಯುತ್ತಿದ್ದಾರೆ. ಜಮೀನಿನಲ್ಲಿ ಒಣಗಿರುವ ಹೆಂಡೆಗಳೇ ಇದ್ದು ಮಳೆ ಬಂದರೆ ಕರಗುತ್ತವೆ. ಜತೆಗೆ ಜಮೀನು ಹಸನುಗೊಳಿಸಿದರೆ ಸರಿಯಾಗುವ ಭರವಸೆ ರೈತರಲ್ಲಿದೆ.
ಕೃಷಿ ಯಂತ್ರಧಾರೆಗೆ ಬೇಡಿಕೆ
ಕೃಷಿ ಕಾರ್ಯಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲ ಸಂಘಸAಸ್ಥೆಗಳು ಕೃಷಿ ಯಂತ್ರಧಾರೆ ಯೋಜನೆಯಡಿ ಹಲವು ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ಬಾಡಿಗೆ ದರದಲ್ಲಿ ರೈತರಿಗೆ ಪೂರೈಸುತ್ತಿದ್ದವು. ಇದರಿಂದ ಬಡ, ಮಧ್ಯಮ ವರ್ಗದ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ ಈ ಯೋಜನೆ ಸ್ಥಗಿತಗೊಂಡಿದ್ದು, ಅನಿವಾರ್ಯವಾಗಿ ಖಾಸಗಿ ನಿವಾಸಿಗಳ ಟ್ರ‍್ಯಾಕ್ಟರ್‌ಗಳ ಮೊರೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ.
ಸ್ವಸಹಾಯ ಸಂಘ ಹಾಗೂ ಎಫ್‌ಪಿಒ ಕಂಪನಿಗಳು ಬಡ ರೈತರಿಗೆ ಕೃಷಿ ಯಂತ್ರಧಾರೆ ಯೋಜನೆಯಡಿ ಹಲವು ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ಬಾಡಿಗೆ ದರದಲ್ಲಿ ಪೂರೈಸುತ್ತಿದ್ದರಿಂದ ಸಾಕಷ್ಟು ರೈತರಿಗೆ ಅನುಕೂಲವಾಗಿತ್ತು. ಆದರೆ ಯೋಜನೆ ಸ್ಥಗಿತಗೊಂಡಿರುವುದು ದುರ್ದೈವ. ಸರಕಾರ ಮರು ಜಾರಿಗೊಳಿಸಿದ್ದಲ್ಲಿ ಬಡ ರೈತರಿಗೆ ಹೆಚ್ಚಿನ ರೀತಿಯಲ್ಲಿ ಸಹಾಯಕವಾಗಲಿದೆ.
— ಟಿ.ನಾಗರಾಜ್, ಜಿಲ್ಲಾ ಅಧ್ಯಕ್ಷ, ರೈತ ಸಂಘ ಹಾಗೂ ಹಸಿರು ಸೇನೆ ಹೊಸಪೇಟೆ
"
ಡೀಸೆಲ್ ಬೆಲೆ ದುಬಾರಿಯಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಡೀಸೆಲ್ ಸರಿಯಾಗಿ ಸಿಗುತ್ತಿಲ್ಲ. ಅನಿವಾರ್ಯವಾಗಿ ಟ್ಯಾಕ್ಟರ್‌ಗಳ ಬಾಡಿಗೆ ಹೆಚ್ಚಳ ಮಾಡಬೇಕಾಗಿದೆ. ರೈತರೇ ಇರುವುದರಿಂದ ಚೌಕಾಸಿ ಮಾಡಿ ರೇಟು ಹೊಂದಿಸಿಕೊAಡು ಟ್ಯಾಕ್ಟರ್ ರಂಟೆ ಹೊಡೆಯುತ್ತೇವೆ.
— ಶಂಕರ್, ಟ್ಯಾಕ್ಟರ್ ಮಾಲೀಕ, ಹೊಸಪೇಟೆ
ಕಳೆದೊಂದು ವಾರದಿಂದ ಒಳ್ಳೆಯ ಮಳೆಯಾಗುತ್ತಿದ್ದು, ಹೊಲ ರಂಟೆ ಹೊಡೆಯಿಸಬೇಕಾಗಿದೆ. ಆದರೆ ಟ್ಯಾಕ್ಟರ್ ಮಾಲೀಕರು ಬಾಡಿಗೆ ದುಬಾರಿ ಮಾಡಿದ್ದಾರೆ. ಡೀಸೆಲ್ ಕೊರತೆ ಮತ್ತು ರೇಟು ಹೆಚ್ಚಾಗಿದೆ ಅಂತಿದ್ದಾರೆ.
— ಎಸ್.ಎಸ್.ನಾಯಕ್, ರೈತ, ಹೊಸಪೇಟೆ