AI 
ವಿಜಯನಗರ

ಹಣ ದುರ್ಬಳಕೆ ಪಿಡಿಒ ಸೇರಿ ಮೂವರಿಗೆ ಜೈಲು ಶಿಕ್ಷೆ

ಮಂಜುನಾಥ
ಹೊಸಪೇಟೆ: ಇಂದಿರಾ ಆವಾಸ್ ಯೋಜನೆಯ ಸರ್ಕಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ಮರಬ್ಬಿಹಾಳು ಗ್ರಾಮ ಪಂಚಾಯಿತಿಯ ಪಿಡಿಒ, ಅಧ್ಯಕ್ಷ ಹಾಗೂ ಸದಸ್ಯೆಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 90 ಸಾವಿರ ರೂ. ದಂಡ ವಿಧಿಸಿ ವಿಜಯನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಮರಬ್ಬಿಹಾಳು ಗ್ರಾಮ ಪಂಚಾಯಿತಿ ಪಿಡಿಒ ವಸಂತರಾಜ್, ಅಧ್ಯಕ್ಷ ರಾಮಚಂದ್ರ ನಾಯ್ಕ ಹಾಗೂ ಪಂಚಾಯಿತಿ ಸದಸ್ಯೆ ಹನುಮವ್ವ ಶಿಕ್ಷೆಗೆ ಒಳಗಾದ ಅಪರಾಧಿಗಳು. 2016ರಲ್ಲಿ ನಡೆದ ಈ ಅಕ್ರಮದ ಕುರಿತು ನಗರ್ ಲೋಕಾಯುಕ್ತ ಡಿವೈಎಸ್ಪಿ ಎನ್.ಆರ್.ಮಹಾಂತರಡ್ಡಿ ತನಿಖೆ ನಡೆಸಿ, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಹಾಗೂ ಐಪಿಸಿ ವಿವಿಧ ಕಲಂಗಳಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಲೋಕಾಯುಕ್ತ ಸಂಸ್ಥೆಯ ಪರವಾಗಿ ಹಿರಿಯ ಸರ್ಕಾರಿ ಅಭಿಯೋಜಕ (ಎಸ್.ಪಿ.ಪಿ) ಡಿ.ನಾರಾಯಣ ವಾದ ಮಂಡಿಸಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿಗಳು ಅನುದಾನ ದುರ್ಬಳಕೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಮಂಗಳವಾರ ತೀರ್ಪು ಪ್ರಕಟಿಸಿದೆ. ಈ ಕುರಿತು ಬಳ್ಳಾರಿ ಲೋಕಾಯುಕ್ತ ಎಸ್ಪಿ ಎನ್.ವಾಸುದೇವರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.