ಹೊಸಪೇಟೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಧಾರ್ಮಿಕ ದತ್ತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣಪ್ಪ, ಎಎಸ್ಪಿ ಮಂಜುನಾಥ, ಎಸಿ ಪಿ.ವಿವೇಲಕಾನಂದ, ಜಿಲ್ಲಾ ನಗರಾಭಿವೃದ್ಧಿಕೋಶ ಪಿಡಿ ಮನೋಹರ್, ಹಿಂದೂ ಧಾರ್ಮಿಕ ಧತ್ತಿ ಇಲಾಖೆ ಎಸಿ ಸವಿತಾ ಇತರರಿದ್ದರು.
- ಸಿಸಿಟಿವಿ, ಫೇಸ್ ರೆಕಗ್ನಿಷನ್ ಅಳವಡಿಕೆಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ
ಹೊಸಪೇಟೆ: ದೇಗುಲಗಳಲ್ಲಿ ಹುಂಡಿ ಎಣಿಕೆ ಕಾರ್ಯವಿಧಾನಕ್ಕೆ ಫೇಸ್ ರೆಕಗ್ನಿಷನ್, ಸಿಸಿಟಿವಿ ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹುಂಡಿ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಳ್ಳುವ ಕಂದಾಯ, ಪೊಲೀಸ್ ಹಾಗೂ ದೇಗುಲದ ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಫೇಸ್ ರೆಕಗ್ನಿಷನ್ ಯಂತ್ರದ ಮೂಲಕವೇ ಹಾಜರಾತಿ ನಮೂದಿಸಬೇಕು. ಎಣಿಕೆ ಕೊಠಡಿಗೆ ಪ್ರವೇಶಿಸುವ ಪ್ರತಿಯೊಬ್ಬ ಸಿಬ್ಬಂದಿ ತಮ್ಮ ಬಳಿ ಇರುವ ನಗದು ವಿವರವನ್ನು ಪ್ರವೇಶ ವಹಿಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದರು.
ಜಿಲ್ಲೆಯ ಎ, ಬಿ ಹಾಗೂ ಅಗತ್ಯವಿರುವ ಸಿ ದರ್ಜೆಯ ದೇಗುಲಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ತಪ್ಪದೇ ಹುಂಡಿ ಎಣಿಕೆ ನಡೆಸಬೇಕು. ಈ ಪ್ರಕ್ರಿಯೆಯು ವಿಭಾಗೀಯಾಧಿಕಾರಿ, ಕಂದಾಯ ಇಲಾಖೆ, ಪೊಲೀಸ್, ತಹಸೀಲ್ದಾರ್, ಪಂಚಾಯಿತಿ, ಬ್ಯಾಂಕ್ ಹಾಗೂ ಗೃಹ ರಕ್ಷಕ ದಳದ (ಹೋಮ್ ಗಾರ್ಡ್ಸ್) ಸಿಬ್ಬಂದಿಗಳ ಜಂಟಿ ಉಸ್ತುವಾರಿಯಲ್ಲಿ ನಡೆಯಬೇಕು. ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳನ್ನು ಹುಂಡಿ ಎಣಿಕೆಗೆ ನಿಯೋಜಿಸುವಂತಿಲ್ಲ. ಎಣಿಕೆ ಸಂದರ್ಭದಲ್ಲಿ ದೊರೆಯುವ ಚಿನ್ನ, ಬೆಳ್ಳಿ ಹಾಗೂ ಇತರೆ ಮೌಲ್ಯಯುತ ವಸ್ತುಗಳನ್ನು ಅದೇ ದಿನ ಪ್ರಮಾಣೀಕೃತ ಮೌಲ್ಯಮಾಪಕರಿಂದ ಪರಿಶೀಲಿಸಬೇಕು ಎಂದರು.
ಜೇಬುಗಳ್ಳತನ ಹಾಗೂ ನಗದು ದುರುಪಯೋಗ ತಡೆಯಲು ಭಕ್ತಾದಿಗಳಿಗೆ ಡಿಜಿಟಲ್ ಪಾವತಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ದೇಗುಲಗಳಲ್ಲಿ ಅಧಿಕೃತ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಬೇಕು. ಅಲ್ಲದೆ, ಅಧಿಸೂಚಿತ ದೇವಾಲಯಗಳಿಗೆ ಸೇರಿದ ಜಮೀನು ಹಾಗೂ ಸ್ಥಿರಾಸ್ತಿಗಳ ಸರ್ವೇ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಿ, ಎಲ್ಲಾ ಆಸ್ತಿ ಮತ್ತು ಜಮೀನುಗಳ ಖಾತೆಗಳನ್ನು ಕಡ್ಡಾಯವಾಗಿ ದೇವಸ್ಥಾನದ ಹೆಸರಿಗೇ ಇಂದೀಕರಣ (ಮ್ಯುಟೇಷನ್) ಮಾಡುವಂತೆ ತಾಕೀತು ಮಾಡಿದರು.