ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಲಾಂಛನವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಬಿಡುಗಡೆಗೊಳಿಸಿದರು.  
ವಿಜಯನಗರ

ಸಮಾಜ ಕಟ್ಟಿ ಬೆಳೆಸುವಲ್ಲಿ ಪೀಠಗಳ ಪಾತ್ರ ಪ್ರಮುಖ

ಹರಪನಹಳ್ಳಿ: ಸಂವೇದನಾಶೀಲ ಜೀವನಕ್ಕೆ ವೀರಶೈವ ಧರ್ಮದ ಕೊಡುಗೆ ಅಪಾರವಾಗಿದ್ದು, ಸಮೃದ್ಧ ನಾಡು ಕಟ್ಟುವುದೇ ಧರ್ಮ ಪೀಠಗಳ ಗುರಿಯಾಗಿದೆ. ಸತ್ಕಾರ್ಯಗಳ ಸಾಧನೆಗೆ ಸಾಮರಸ್ಯ ಮತ್ತು ಸಂಘಟನೆ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಪಟ್ಟಣದ ತೆಗ್ಗಿನಮಠ ಸಂಸ್ಥಾನದ ಆವರಣದಲ್ಲಿ  ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಂಗಳವಾರ ಆಶೀರ್ವಚನ ನೀಡಿದರು. ಪ್ರಕೃತಿ ಮಾನವರನ್ನು ಸೃಷ್ಟಿಸಿದರೆ ಸಂಸ್ಕಾರ ದೇವಮಾನವರನ್ನು ಸೃಷ್ಟಿಸುತ್ತದೆ. ಸಾಮಾಜಿಕ ಸಂಪ್ರದಾಯಗಳು ಕೆಲವೊಮ್ಮೆ ಬದಲಾಗಬಹುದು. ಆದರೆ ನೈತಿಕ ನಿಯಮಗಳು ಶಾಶ್ವತವಾಗಿರುತ್ತವೆ. ಧರ್ಮ, ಸಂಸ್ಕೃತಿ, ಪರಂಪರೆ ರಕ್ಷಿಸಿ ಸುಂದರ ಸಮಾಜ ಕಟ್ಟಿ ಬೆಳೆಸುವಲ್ಲಿ ಪೀಠ-ಮಠಗಳ ಪಾತ್ರ ಮಹತ್ವದ್ದಾಗಿದೆ ಎಂದರು. 
ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ವಿಕಾಸಕ್ಕೆ ಅವಶ್ಯವಾದ ಸೂತ್ರಗಳನ್ನು ಬೋಧಿಸಿದ್ದಾರೆ. ನೂತನ ಪದಾಧಿಕಾರಿಗಳು ಸಂಘಟನೆ ಹೊಂದಿ ಸತ್ಕಾರ್ಯಗಳನ್ನು ಮಾಡುವ ಶಕ್ತಿಯನ್ನು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಅನುಗ್ರಹಿಸಲೆಂದು ತಿಳಿಸಿದರು. 
ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭೌತಿಕ ಜೀವನ ಸಮೃದ್ಧಗೊಂಡರೆ ಸಾಲದು. ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕು. ಸಂಪತ್ತು ಬೆಳೆದಂತೆ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು ಎಂದರು. 
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಸಿಂಧಗಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಕಾರ್ಯದರ್ಶಿ ಮೇಲಣಗವಿ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ,  ಬಿಚಕುಂದದ ಸೋಮಲಿಂಗ ಶಿವಾಚಾರ್ಯರು, ಶ್ರೀಕಂಠ ಶಿವಾಚಾರ್ಯರು, ರೇವಣಸಿದ್ಧ ಶಿವಾಚಾರ್ಯರು, ಡಾ.ಮಹಾಂತಲಿಂಗ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ಶಿವಮೂರ್ತಿ ಶಿವಾಚಾರ್ಯರು, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಂ.ರಾಜಶೇಖರ ಇತರರಿದ್ದರು.