ಕನ್ನಡ ವಿವಿಯಲ್ಲಿ ಸಿಂಧು ಶಿಶು ಕಲ್ಯಾಣ ಯೋಜನೆ ಠೇವಣಿ ಪತ್ರವನ್ನು ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ವಿತರಣೆ ಮಾಡಿದರು. ಸಿಂಧು ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಅಧ್ಯಕ್ಷ ಬಿ.ರಾಜಶೇಖರ್, ಉಪಾಧ್ಯಕ್ಷ ಅಮರೇಶ ಶೆಟ್ಟಿ ಇತರರಿದ್ದರು.
- ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯ
- ಸಿಂಧು ಶಿಶು ಕಲ್ಯಾಣ ಠೇವಣಿ ಯೋಜನೆ ಕಾರ್ಯಕ್ರಮ
ಹೊಸಪೇಟೆ: ಕನ್ನಡತನವನ್ನು, ಕನ್ನಡದ ಹಿರಿಮೆ-ಗರಿಮೆಯನ್ನು ನಮ್ಮ ಮುಂದಿನ ಜನಾಂಗಕ್ಕೆ ತಲುಪಿಸುವ ಬಹುದೊಡ್ಡ ಜವಾಬ್ದಾರಿ ಕನ್ನಡ ವಿವಿಗಿದೆ ಎಂದು ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಕನ್ನಡ ವಿವಿಯ ಮಂಟಪ ಸುಭಾಂಗಣದಲ್ಲಿ ಬುಧವಾರ ಸಿಂಧು ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಿಂಧು ಶಿಶು ಕಲ್ಯಾಣ ಠೇವಣಿ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಸಹಕಾರಿ ಬ್ಯಾಂಕುಗಳು ಜನರ ಜೀವನದ ಅವಿಭಾಜ್ಯ ಭಾಗವಾಗಿವೆ. ರೈತರು, ಸಣ್ಣ ಸಂಬಳದಾರರು ಪ್ರಮುಖ ಗ್ರಾಹಕರು. ಜನರ ಮನೆ ಬಾಗಿಲಿಗೆ ತಲುಪುವ ನಿಜವಾದ ಬ್ಯಾಂಕಾಗಿದೆ. ಜನರ ಒಳಿತೇ ನಿಜವಾದ ಸಹಕಾರ. ಸಹಕಾರಿ ಬ್ಯಾಂಕುಗಳ ಉದ್ದೇಶ ಕೇವಲ ಲಾಭಪಡೆಯುವುದಲ್ಲ. ಲಾಭಾಂಶವನ್ನು ಜನರ ಒಳಿತಿಗಾಗಿ ಹೇಗೆ ಬಳಕೆ ಮಾಡಬಹುದು ಎಂಬುದೇ ಸಹಕಾರದ ನಿಜವಾದ ಅರ್ಥ. ಬ್ಯಾಂಕುಗಳು ತಮ್ಮ ಮುಂದಿನ ಗುರಿ, ಯೋಜನೆಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊAಡು, ಜನರ ವಿಶ್ವಾಸವನ್ನು ಗಳಿಸಬೇಕು. ಜನರ ಸೇವೆಗೆ ಸಮರ್ಪಿತವಾಗಿರುವ ಸಹಕಾರ ಚಳುವಳಿಯು ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಮೂಲಾಧಾರವಾಗಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ, ಸಿಂಧು ಶಿಶು ಕಲ್ಯಾಣ ಠೇವಣಿ ಯೋಜನೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಆರ್ಥಿಕ ಪ್ರೋತ್ಸಾಹ ನೀಡುತ್ತದೆ. ಇದು ಎರಡು ರೀತಿಯಲ್ಲಿ ಪ್ರಯೋಜನಕಾರಿ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುತ್ತದೆ. ಹಾಗೂ ಸರ್ಕಾರಿ ಶಾಲೆಗಳತ್ತ ಜನರ ನಂಬಿಕೆಯನ್ನು ಪುನರುಜ್ಜೀವನಗೊಳಿಸುತ್ತದೆ ಎಂದರು.
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ.ನಂಜನಗೌಡ ಮಾತನಾಡಿ, ಸಹಕಾರ ವ್ಯವಸ್ಥೆ ಸಮಾಜ ಹುಟ್ಟಿದಾಗಿನಿಂದಲೂ ಇದೆ. ಸೌಹಾರ್ದ ಬ್ಯಾಂಕುಗಳು ಜನರ ಸೇವೆಯನ್ನು ಕೇಂದ್ರ ಬಿಂದುವಾಗಿಸಿಕೊAಡು ಕಾರ್ಯನಿರ್ವಹಿಸುತ್ತಿವೆ. ಲಾಭಕ್ಕಿಂತಲೂ ಜನರ ಒಳಿತಿನತ್ತ ಕಾಳಜಿ ತೋರಿಸುವ ಈ ಬ್ಯಾಂಕುಗಳು ನಿಜವಾದ ಅರ್ಥದಲ್ಲಿ ಜನರ ಬ್ಯಾಂಕುಗಳು ಎಂದರು.
ಸಿಂಧು ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಅಧ್ಯಕ್ಷ ಬಿ.ರಾಜಶೇಖರ್, ಉಪಾಧ್ಯಕ್ಷ ಅಮರೇಶ ಶೆಟ್ಟಿ ಇತರರಿದ್ದರು.